ಮುಂಬೈ: ನಾಯಕ ಹಾರ್ದಿಕ್ ಪಾಂಡ್ಯ ಅರ್ಧಶತಕ ಮತ್ತು ಕನ್ನಡಿಗ ಅಭಿನವ್ ಮನೋಹರ್, ಮಿಲ್ಲರ್ ಅವರ ಉಪಯುಕ್ತ ರನ್ಗಳ ನೆರವಿನಿಂದ ಗುಜರಾತ್ ಟೈಟಾನ್ಸ್ನ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 192 ರನ್ಗಳಿಸಿತ್ತು. ಆದ್ರೆ ಎದುರಾಳಿ ನೀಡಿದ ಗುರಿಯನ್ನು ಮುಟ್ಟದೇ ರಾಜಸ್ಥಾನ್ ರಾಯಲ್ಸ್ ತಂಡ 37 ರನ್ಗಳಿಂದ ಹೀನಾಯ ಸೋಲು ಅನಭವಿಸಿತು.
ಗುಜರಾತ್ ಟೈಟನ್ಸ್ ಇನ್ನಿಂಗ್ಸ್:ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ, ಆರಂಭಿಕರಾದ ಮ್ಯಾಥ್ಯೂ ವೇಡ್ 12 ರನ್ ಮತ್ತು ಶುಬ್ಮನ್ ಗಿಲ್ 13 ರನ್ ಹಾಗೂ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ವಿಜಯ್ ಶಂಕರ್ 2 ರನ್ ಗಳಿಸಿ ತಂಡದ ಮೊತ್ತ 53 ರನ್ಗಳಾಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. 7 ಓವರ್ಗೂ ಮುನ್ನವೇ ಅಗ್ರಕ್ರಮಾಂಕದ ಮೂವರನ್ನು ಕಳೆದುಕೊಂಡ ಟೈಟಾನ್ಸ್ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು.
ಆಗ ತಂಡಕ್ಕೆ ಆಸರೆಯಾದವರೇ ನಾಯಕ ಹಾರ್ದಿಕ್ ಮತ್ತು ಅಭಿನವ್ ಮನೋಹರ್. ಮೊದಲು ನಿಧಾನಗತಿ ಬ್ಯಾಟಿಂಗ್ ಮಾಡಿದರೂ ನಂತರ ಅಬ್ಬರದ ಬ್ಯಾಟಿಂಗ್ ಮಾಡಿದ ಮನೋಹರ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 43 ರನ್ಗಳಿಸಿ ಔಟಾದರು. ಮನೋಹರ್ ವಿಕೆಟ್ ನಂತರವೂ ಅಬ್ಬರಿಸಿದ ನಾಯಕ ಹಾರ್ದಿಕ್ ಪಾಂಡ್ಯ 52 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ಗಳ ಸಹಿತ ಅಜೇಯ 87 ರನ್ ಸಿಡಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ಡೇವಿಡ್ ಮಿಲ್ಲರ್ 14 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 31 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಈ ಜೋಡಿ ಕೊನೆಯ 25 ಎಸೆತಗಳಲ್ಲಿ 53 ರನ್ಗಳಿಸಿತು.
ಒಟ್ಟಿನಲ್ಲಿ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ ಗುಜರಾತ್ ಟೈಟಾನ್ಸ್ ತಂಡ 192 ಕಲೆ ಹಾಕಿತ್ತು. ರಾಯಲ್ಸ್ ಪರ ಚಾಹಲ್ 32ಕ್ಕೆ 1 ವಿಕೆಟ್, ಕುಲ್ದೀಪ್ ಸೇನ್ 51ಕ್ಕೆ 1 ವಿಕೆಟ್, ರಿಯಾನ್ ಪರಾಗ್ 12 ಕ್ಕೆ 1 ವಿಕೆಟ್ ಪಡೆದರು.
ರಾಜಸ್ಥಾನ್ ರಾಯಲ್ಸ್: ಎದುರಾಳಿ ಗುಜರಾತ್ ಟೈಟಾನ್ಸ್ ನೀಡಿದ 193 ರನ್ಗಳ ಗುರಿಯನ್ನು ಬೆನ್ನತ್ತಿದ್ದ ರಾಜಸ್ಥಾನ್ ತಂಡ ಆರಂಭದಿಂದಲೇ ಆಘಾತ ಎದುರಿಸುತ್ತಾ ಬಂದಿತು. ದೇವದತ್ ಪಡಿಕ್ಕಲ್ ಡಕ್ಔಟ್, ರವಿಚಂದ್ರನ್ ಅಶ್ವಿನ್ 8 ರನ್, ಜೋಸ್ ಬಟ್ಲರ್ 54 ರನ್ ಗಳಿಸಿ ಪವರ್ಪ್ಲೇ ಮುಗಿಯುವಷ್ಟರಲ್ಲೇ ಪೆವಿಲಿಯನ್ ಹಾದಿ ತುಳಿದರು. ಪವರ್ಪ್ಲೇನಲ್ಲಿ ಅಬ್ಬರಿಸಿದ ಜೋಸ್ ಬಟ್ಲರ್ 23 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸ್ ಬಾರಿಸುವ ಮೂಲಕ ತಮ್ಮ ಅರ್ಧಶತಕ ಪೂರ್ಣಗೊಳಿಸಿದರು. ಬಳಿಕ ಲಾಕಿ ಫರ್ಗುಸನ್ ಎಸೆದ ಬಾಲ್ಗೆ ಬೋಲ್ಡ್ ಆದರು.
ನಾಯಕ ಸಂಜು ಸ್ಯಾಮ್ಸನ್ ಸೇರಿದಂತೆ ಬಳಿಕ ಬಂದ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯದೇ ಪೆವಿಲಿಯನ್ ಹಾದಿ ತುಳಿದರು. 20 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡ 155 ರನ್ಗಳನ್ನು ಕಲೆ ಹಾಕಿತು. ಆದರೂ ಟೈಟಾನ್ಸ್ ನೀಡಿದ ಗುರಿಯನ್ನು ಮುಟ್ಟದೇ ಆರ್ಆರ್ ತಂಡ 37 ರನ್ಗಳ ಹೀನಾಯ ಸೋಲು ಕಂಡಿತು.
ಇದನ್ನೂ ಓದಿ:ಹ್ಯಾಟ್ರಿಕ್ ಜಯದ ಮೇಲೆ ಕಣ್ಣು: ಕೋಲ್ಕತ್ತಾ ನೈಟ್ರೈಡರ್ಸ್ ಸವಾಲಿಗೆ ಹೈದರಾಬಾದ್ ಸಿದ್ಧ
ಆರ್ಆರ್ ತಂಡದ ಪರ ನಾಯಕ ಸಂಜು ಸ್ಯಾಮ್ಸನ್ 11 ರನ್, ರಾಸಿ ವ್ಯಾನ್ ಡೆರ್ ಡಸ್ಸೆನ್ 6 ರನ್, ಶಿಮ್ರಾನ್ ಹೆಟ್ಮಾಯರ್ 29 ರನ್, ಜೇಮ್ಸ್ ನೀಶಮ್ 17 ರನ್, ರಿಯಾನ್ ಪರಾಗ್ 18 ರನ್, ಯಜ್ವೇಂದ್ರ ಚಾಹಲ್ 5 ರನ್, ಕುಲದೀಪ್ ಸೇನ್ 4 ರನ್ ಗಳಿಸಿ ಮತ್ತು ಪ್ರಸಿದ್ಧ್ ಕೃಷ್ಣ ಖಾತೆ ತೆಗೆಯದೇ ಅಜೇಯರಾಗಿ ಉಳಿದರು. ಟೈಟಾನ್ಸ್ ಪರ ಯಶ್ ದಯಾಳ್ ಮತ್ತು ಲಾಕಿ ಫರ್ಗುಸನ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಶಮಿ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಆಸರೆಯಾದರು.
ಇಂದು ಸಂಜೆ 7.30ಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಗೆಲುವಿಗಾಗಿ ಸೆಣಸಾಟ ನಡೆಯಲಿದೆ.