ಅಹಮದಾಬಾದ್ (ಗುಜರಾತ್): ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಸಜ್ಜಾಗಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 5 ಬಾರಿ ಕಪ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದೆ. ಮಳೆಯ ಕಾರಣ 7:45 ಟಾಸ್ ಆಗಿದ್ದು, ಪಂದ್ಯ 8 ಗಂಟೆಗೆ ಆರಂಭವಾಗಿದೆ.
ಐದು ಬಾರಿ ಪ್ರಶಸ್ತಿ ವಿಜೇತ ಮುಂಬೈ ಇಂಡಿಯನ್ಸ್ ಕಳೆದ ವರ್ಷ ಲೀಗ್ನಲ್ಲಿ ಕಳಪೆ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ಬಾರಿ ಮೊದಲ ಪಂದ್ಯದಲ್ಲಿ ಸೋತು ಲೀಗ್ ಆರಂಭಿಸಿ ನಂತರ ಸತತ ವೈಫಲ್ಯಗಳನ್ನು ಕಂಡಿತು. ಆದರೆ, ಲೀಗ್ ಅರ್ಧ ಮುಗಿಯುತ್ತಿದ್ದಂತೆ ತಂಡದ ಆಟಗಾರರು ಲಯಕ್ಕೆ ಮರಳಿದ ಕಾರಣ 14 ರಲ್ಲಿ 8 ಪಂದ್ಯಗಳನ್ನು 16 ಅಂಕದಿಂದ ಪಾಂಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಎಲಿಮಿನೇಟರ್ ಪಂದ್ಯದಲ್ಲಿ ಆಶಿಶ್ ಮದ್ವಾಲ್ ಅವರ ವಿಂಚಿನ ಬೌಲಿಂಗ್ ದಾಳಿಯಿಂದ ಲಕ್ನೋವನ್ನು ಮಣಿಸಿ ಕ್ವಾಲಿಫೈಯರ್ 2ರಲ್ಲಿ ಗುಜರಾತ್ ವಿರುದ್ಧದ ಹಣಾಹಣಿಗೆ ತಯಾರಾಗಿದೆ.
ಅರ್ಧ ಲೀಗ್ ನಂತರ ಸೂರ್ಯ ಕುಮಾರ್ ಯಾದವ್, ಕ್ಯಾಮರಾನ್ ಗ್ರೀನ್, ಟಿಮ್ ಡೇವಿಡ್, ಇಶಾನ್ ಕಿಶನ್ ಲಯಕ್ಕೆ ಬಂದಿದ್ದು ತಂಡಕ್ಕೆ ಸಹಕಾರಿಯಾಗಿತ್ತು. ಆದರೆ, ಮುಂಬೈಗೆ ಬೌಲಿಂಗ್ನಲ್ಲಿ ಸಮಸ್ಯೆ ಎದುರಿಸುತ್ತಿತ್ತು. ಅದಕ್ಕೆ ಮುಖ್ಯ ಕಾರಣ ಅಂತಾರಾಷ್ಟ್ರೀಯ ಸ್ಟಾರ್ ಬೌಲರ್ಗಳಾದ ಜಸ್ಪಿತ್ ಬೂಮ್ರಾ ಮತ್ತು ಜೋಫ್ರಾ ಆರ್ಚರ್ ಗಾಯಗೊಂಡು ತಂಡದಿಂದ ಹೊರಗಿಳಿದಿರುವುದು. ಆದರೆ, ವಿದೇಶಿ ಬೌಲರ್ಗಳ ಜೊತೆಗೆ ಭಾರತೀಯ ಅನಾನುಭವಿ ಬೌಲಿಂಗ್ ಪಡೆಯನ್ನೇ ಬಳಸಿ ರೋಹಿತ್ ಶರ್ಮಾ ಯಶಸ್ಸು ಕಂಡಿದ್ದಾರೆ.
ಗುಜರಾತ್ ಟೈಟಾನ್ಸ್ ತನ್ನ ಚಾಂಪಿಯನ್ ಆಟವನ್ನು ಈ ಆವೃತ್ತಿಯಲ್ಲೂ ಮುಂದುವರೆಸಿತು. ಆರಂಭಿಕ ಶುಭಮನ್ ಗಿಲ್ ಎರಡು ಶತಕ ಗಳಿಸಿದ್ದಲ್ಲದೇ ಈ ಆವೃತ್ತಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ಜೊತೆ ನಾಯಕ ಹಾರ್ದಿಕ್, ತೆವಾಟಿಯಾ, ರಶೀದ್ ಖಾನ್ ಮತ್ತು ವಿಜಯ್ ಶಂಕರ್ ಸಹ ಅಬ್ಬರಿಸಿದ್ದು, ಲೀಗ್ನ 14 ಪಂದ್ಯದಲ್ಲಿ 10ನ್ನು ಗೆದ್ದುಕೊಂಡಿತು. ಆದರೆ ಚೆನ್ನೈನ ಚೆಪಾಕ್ನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ್ನು ಸೋಲಿಸಲಾಗದೇ, ನೇರ ಫೈನಲ್ ಪ್ರವೇಶವನ್ನು ಕಳೆದುಕೊಂಡು ಇಂದು ಮುಂಬೈ ವಿರುದ್ಧ ಕಣಕ್ಕಿಳಿಯುತ್ತಿದೆ.