ಅಹಮದಾಬಾದ್:ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ನ 5 ಬಾರಿಯ ಚಾಂಪಿಯನ್ ಆಗಿರುವ ಸಂಗತಿ ಗೊತ್ತೇ ಇದೆ. ತಂಡ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ರಂತಹ ದೈತ್ಯ ಬ್ಯಾಟಿಂಗ್ ಪಡೆಯನ್ನೇ ಹೊಂದಿದೆ. ಆದರೆ, ತಂಡದ ಸಾಂಘಿಕ ಪ್ರದರ್ಶನ ಮಾತ್ರ ಗೌಣವಾಗಿದೆ. ಈ ಸೀಸನ್ನ ಮೊದಲೆರಡು ಪಂದ್ಯಗಳನ್ನು ಸೋತು ಟೀಕೆಗೆ ಗುರಿಯಾಗಿದ್ದ ತಂಡ, ಭರ್ಜರಿ ಕಮ್ಬ್ಯಾಕ್ ಮಾಡಿ ಮುಂದಿನ ಮೂರೂ ಮ್ಯಾಚ್ ಗೆದ್ದಿತ್ತು. ಇದೀಗ ಮತ್ತೆ ಸತತ 2 ಪಂದ್ಯದಲ್ಲಿ ಸೋತಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಎದುರಿನ ಸವಾಲಿನಲ್ಲಿ ಮುಂಬೈ ಇಂಡಿಯನ್ಸ್ ಮುಗ್ಗರಿಸಿದೆ. ಬ್ಯಾಟಿಂಗ್ ವೈಫಲ್ಯದಿಂದಾಗಿ 55 ರನ್ಗಳ ಸೋಲು ಕಂಡಿತು. ಮೊದಲು ಬ್ಯಾಟ್ ಮಾಡಿ ಗುಜರಾತ್ ಟೈಟಾನ್ಸ್ ನೀಡಿದ 207 ರನ್ಗಳ ಸವಾಲಿಗೆ ಉತ್ತರವಾಗಿ ಮುಂಬೈ 152 ರನ್ ಮಾತ್ರ ಗಳಿಸಿ ಸೋಲು ಕಂಡಿತು.
ಫ್ಲಾಪ್ ಬ್ಯಾಟಿಂಗ್:ನೇಹಲ್ ವಧೇರಾ, ಕ್ಯಾಮರೂನ್ ಗ್ರೀನ್ ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಕೂಡ ಗುಜರಾತ್ ಬೌಲಿಂಗ್ ಎದುರಿಸಲಿಲ್ಲ. ನಾಯಕ ರೋಹಿತ್ ಶರ್ಮಾ 2, ಇಶಾನ್ ಕಿಶನ್ 13, ಕೆಲ ಪಂದ್ಯಗಳಲ್ಲಿ ಮಿಂಚು ಹರಿಸಿದ್ದ ತಿಲಕ್ ವರ್ಮಾ 2, ಟಿಮ್ ಡೇವಿಡ್ ಸೊನ್ನೆ ಸುತ್ತುವ ಮೂಲಕ ಶಸ್ತ್ರತ್ಯಾಗ ಮಾಡಿದರು. ಇದರಿಂದ ತಂಡ ರನ್ ಗಳಿಸಲು ಪರದಾಡಿತು. ಕಳೆದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಆಲ್ರೌಂಡರ್ ಕ್ಯಾಮರೂನ್ ವೈಟ್ 33 ರನ್ ಗಳಿಸಿ ಮತ್ತೊಮ್ಮೆ ತಂಡಕ್ಕೆ ನೆರವಾದರು.
ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ನೇಹಲ್ ವಧೇರಾ ಉತ್ತಮವಾಗಿ ಬ್ಯಾಟ್ ಬೀಸಿದರು. ತಲಾ 3 ಬೌಂಡರಿ, ಸಿಕ್ಸರ್ ಸಮೇತ 40 ರನ್ ಮಾಡಿ ತಂಡದ ಗರಿಷ್ಠ ಸ್ಕೋರರ್ ಆದರು. ಬೌಲಿಂಗ್ನಲ್ಲಿ ಮಿಂಚಿದ್ದ ಹಿರಿಯ ಸ್ಪಿನ್ನರ್ ಪಿಯೂಷ್ ಚಾವ್ಲಾ 18 ರನ್ ಗಳಿಸಿದರು. ಗುಜರಾತ್ ಕರಾರುವಾಕ್ ಬೌಲಿಂಗ್ ದಾಳಿಗೆ ನಲುಗಿದ ಮುಂಬೈ 9 ವಿಕೆಟ್ಗೆ 152 ರನ್ ಮಾತ್ರ ಗಳಿಸಿತು.