ಅಹಮದಾಬಾದ್ (ಗುಜರಾತ್):ವೀಕೆಂಡ್ನ ಡಬಲ್ ಹೆಡರ್ ಪಂದ್ಯದ ಮೊದಲ ಮುಖಾಮುಖಿಯಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯುತ್ತಿದೆ. ಇದನ್ನು ಅಣ್ಣಾ ತಮ್ಮರ ನಡುವಿನ ಕಾಳಗ ಎಂದೂ ಕರೆಯಬಹುದಾಗಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡ ಕೆಎಲ್ ರಾಹುಲ್ ಬದಲಿಯಾಗಿ ಕೃನಾಲ್ ಪಾಂಡ್ಯ ಲಕ್ನೋವನ್ನು ಮುನ್ನಡೆಸುತ್ತಿದ್ದರೆ, ಹಾಗೇ ಹಾಲಿ ಚಾಂಪಿಯನ್ ಗುಜರಾತ್ ಹಾರ್ದಿಕ್ ನಾಯಕತ್ವದಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 51ನೇ ಪಂದ್ಯ ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಪಂದ್ಯದದ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೃನಾಲ್ ಪಾಂಡ್ಯ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ. ಲಕ್ನೋದಲ್ಲಿ ಒಂದು ಬದಲಾವಣೆಯಾಗಿದ್ದು, ಬಹಳಾ ದಿನಗಳಿಂದ ಬೆಂಚ್ ಕಾದಿದ್ದ ಕ್ವಿಂಟನ್ ಡಿ ಕಾಕ್ಗೆ ಇಂದು ಖಾತೆ ತೆರೆಯಲಿದ್ದಾರೆ. ನವೀನ್ ಉಲ್ ಹಕ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ, ಉಳಿದಂತೆ ಹಳೆ ತಂಡದಲ್ಲೇ ಮುಂದುವರೆದಿದೆ. ಗುಜರಾತ್ ಸಹ ಒಂದು ಬದಲಾವಣೆ ಮಾಡಿದ್ದು, ಲಿಟಲ್ ಬದಲಾಗಿ ಅಲ್ಜಾರಿ ಜೋಸೆಫ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿದೆ.
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಈ ಆವೃತ್ತಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಎಪ್ರಿಲ್ 22 ರಂದು ನಡೆದ ಪಂದ್ಯದಲ್ಲಿ ಗುಜರಾತ್ ಬೌಲಿಂಗ್ ಬಲದಿಂದ ಲಕ್ನೋವನ್ನು ಮಣಿಸಿತ್ತು. ಅಂದು ಗುಜರಾತ್ ನಾಯಕ ಹಾರ್ದಿಕ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದರು. ಆದರೆ 20 ಓವರ್ಗೆ 135 ರನ್ ಅಷ್ಟೇ ಗಳಿಸಲು ಸಾಧ್ಯವಾಯಿತು. ಈ ಗುರಿಯನ್ನು ಬೆನ್ನು ಹತ್ತಿದ್ದ ಲಕ್ನೋ ಶಮಿ ದಾಳಿಗೆ ನಲುಗಿ 20 ಓವರ್ಗೆ ಕೇವಲ 128 ರನ್ ಗಳಿಸಿತು. ಇದರಿಂದ ಜಿಟಿ 7 ರನ್ನ ಗೆಲುವು ಕಂಡಿತ್ತು.
ಕೃನಾಲ್ ನಾಯಕತ್ವದ ಮೊದಲ ಪಂದ್ಯ ಚೆನ್ನೈ ವಿರುದ್ಧ ನಡೆಯಿತು ಆದರೆ ಅದು ಮಳೆಯಿಂದಾಗಿ ರದ್ದಾಗಿ, ಫಲಿತಾಂಶ ರಹಿತ ಪಂದ್ಯವಾಯಿತು. ಇದರಿಂದ ಚೆನ್ನೈ ಮತ್ತು ಲಕ್ನೋಗೆ ತಲಾ ಒಂದು ಅಂಕವನ್ನು ಹಂಚಲಾಗಿತ್ತು. ಗುಜರಾತ್ ಟೈಟಾನ್ಸ್ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ನ್ನು ಎದುರಿಸಿ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಇಂದಿನ ಪಂದ್ಯ ಗೆದ್ದಲ್ಲಿ ಗುಜರಾತ್ ಬಹುತೇಕ ಪ್ಲೇ ಆಫ್ ಪ್ರವೇಶ ಪಡೆದಂತಾಗುತ್ತದೆ.