ಅಹಮದಾಬಾದ್ (ಗುಜರಾತ್): ಗುಜರಾತ್ ವಿರುದ್ಧ ಉತ್ತಮ ಆರಂಭ ಕಂಡರೂ ನಂತರ ಸತತ ವಿಕೆಟ್ ಪತನದಿಂದ ಲಕ್ನೋ ಸೂಪರ್ ಜೈಂಟ್ಸ್ 56 ರನ್ನ ಸೋಲು ಕಂಡಿತು. ಟೈಟಾನ್ಸ್ನ ಮೋಹಿತ್ ಶರ್ಮಾ 4 ವಿಕೆಟ್ ಕಿತ್ತರು, ಇದರಿಂದ 7 ವಿಕೆಟ್ ನಷ್ಟ ಅನುಭವಿಸಿದ ಲಕ್ನೋ 20 ಓವರ್ನಲ್ಲಿ 171 ರನ್ ಗಳಿಸಲಷ್ಟೇ ಶಕ್ತವಾಯಿತು.
228 ರನ್ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಲಕ್ನೋ ಸೂಪರ್ ಜೈಂಟ್ಸ್ 88 ರನ್ ಉತ್ತಮ ಆರಂಭಿಕ ಜೊತೆಯಾಟ ಪಡೆಯಿತು. ಲಕ್ನೋ ಪರ ಈ ಆವೃತ್ತಿಯ ಮೊದಲ ಪಂದ್ಯ ಆಡುತ್ತಿರುವ ಡಿ ಕಾಕ್ ಭರ್ಜರಿ ಬ್ಯಾಟ್ ಬೀಸಿ ತಮ್ಮ ಅಂತರಾಷ್ಟ್ರೀಯ ತಂಡದ ಫಾರ್ಮ್ನ್ನು ಮುಂದುವರೆಸಿದರು.
48 ರನ್ ಮಾಡಿದ ಮೇಯರ್ಸ್ 9ನೇ ಓವರ್ನಲ್ಲಿ ಔಟ್ ಆದರು. ಅವರ ನಂತರ ಬಂದ ಎಲ್ಲಾ ಬ್ಯಾಟರ್ಗಳು ಡಿ ಕಾಕ್ ಜೊತೆ ರನ್ ಸೇರಿಸಲು ಆಗಲಿಲ್ಲ. ದೀಪಕ್ ಹೂಡಾ (11), ಮಾರ್ಕಸ್ ಸ್ಟೋಯ್ನಿಸ್ (4) ಬೇಗ ಔಟ್ ಆದರು. ಅವರ ಬೆನ್ನಲ್ಲೇ 70 ರನ್ ಗಳಿಸಿದ್ದ ಡಿ ಕಾಕ್ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದರು.
ನಂತರ ಲಕ್ನೋ ಸರಣಿ ಪತನ ಕಂಡಿತು. ಪೂರನ್ (3), ಬದೋನಿ (21) ಮತ್ತು ನಾಯಕ ಕೃನಾಲ್ ಪಾಂಡ್ಯ ಶೂನ್ಯಕ್ಕೆ ವಿಕೆಟ್ ಕೊಟ್ಟರು. ಸಿಂಗ್ ಮತ್ತು ರವಿ ಕೊನೆಯ ವರೆಗೂ ಉಳಿದರು. ಗುಜರಾತ್ ಪರ ಮಾಹಿತ್ ಶರ್ಮಾ 4, ಶಮಿ, ನೂರ್ ಅಹಮ್ಮದ್ ಮತ್ತು ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದರು.
ಗುಜರಾತ್ ಇನ್ನಿಂಗ್ಸ್:ಇದಕ್ಕೂ ಮುನ್ನ ಆರಂಭಿಕ ಬ್ಯಾಟರ್ಗಳಾದ ವೃದ್ಧಿಮಾನ್ ಸಹಾ ಹಾಗೂ ಶುಭಮನ್ ಗಿಲ್ ಅವರ ಅಬ್ಬರದ ರನ್ ಗಳಿಕೆಯಿಂದ ಗುಜರಾತ್ ಟೈಟಾನ್ಸ್ ನಿಗದಿತ ಓವರ್ ಅಂತ್ಯಕ್ಕೆ 2 ವಿಕೆಟ್ ನಷ್ಟದಿಂದ 227 ರನ್ ಕಲೆಹಾಕಿದೆ. ಗುಜರಾತ್ನ ಬ್ಯಾಟಿಂಗ್ ಅಬ್ಬರಕ್ಕೆ ಬರೋಬ್ಬರಿ ಎಂಟು ಜನ ಬೌಲರ್ಗಳನ್ನು ಲಕ್ನೋ ನಾಯಕ ಕೃನಾಲ್ ಕಣಕ್ಕಿಳಿಸಿದರೂ ಪ್ರಯೋಜನವಾಲಿಲ್ಲ. ಇದರಿಂದ ಲಕ್ನೋ ಸೂಪರ್ ಜೈಂಟ್ಸ್ ಈ ಪಂದ್ಯವನ್ನು ಗೆಲ್ಲಲು 228 ರನ್ಗಳನ್ನು ಗಳಿಸಬೇಕಿದೆ.
ಟಾಸ್ ಸೋತು ಬ್ಯಾಟಿಂಗ್ ಬಂದ ಹಾಲಿ ಚಾಂಪಿಯನ್ ತಂಡ ಗುಜರಾತ್ ತನ್ನ ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾದ ವೃದ್ಧಿಮಾನ್ ಸಹಾ, ಶುಭಮನ್ ಗಿಲ್ ಜೋಡಿ ಬರೋಬ್ಬರಿ 142 ರನ್ ಜೊತೆಯಾಟ ಆಡಿದರು. ಇವರ ಅಬ್ಬರದ ಬ್ಯಾಟಿಂಗ್ನಿಂದ ಟೈಟಾನ್ಸ್ ತಂಡ ಪವರ್ ಪ್ಲೇಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ದಾಖಲೆ ಬರೆಯಿತು. ವೃದ್ಧಿಮಾನ್ ಸಹಾ ಪವರ್ ಪ್ಲೇಯನ್ನು ವೈಯಕ್ತಿಕ ಗರಿಷ್ಠ ರನ್ ಸಾಧನೆ ಮಾಡಿದರು.