ಬೆಂಗಳೂರು: ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ 1,000 ರನ್ ಪೂರೈಸುವ ಮೂಲಕ ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೃತ್ತಿ ಜೀವನಕ್ಕೆ ಮತ್ತೊಂದು ಗರಿಯನ್ನು ಸೇರಿಸಿದ್ದಾರೆ. ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್ಆರ್) ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಈ ಮೈಲಿಗಲ್ಲನ್ನು ತಲುಪಿದರು.
ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ 175 ಸ್ಟ್ರೈಕ್ ರೇಟ್‌ನಲ್ಲಿ 44 ಎಸೆತಗಳಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಒಳಗೊಂಡ 77 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನ ಸಹಾಯದಿಂದ ಆರ್‌ಸಿಬಿ 189 ರನ್‌ಗಳಿಸಿತು.
ಮ್ಯಾಕ್ಸ್‌ವೆಲ್ ಅವರನ್ನು 2021 ರಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು 14.25 ಕೋಟಿ ರೂಪಾಯಿಗೆ ಖರೀದಿಸಿತು. ಬೆಂಗಳೂರು ಪರ 35 ಪಂದ್ಯಗಳಲ್ಲಿ ಒಟ್ಟು 1,067 ರನ್ ಗಳಿಸಿದ್ದಾರೆ. ಅವರು 10 ಅರ್ಧಶತಕಗಳನ್ನು ಗಳಿಸಿದ್ದು, 92 ಬೌಂಡರಿಗಳು ಮತ್ತು 59 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.
ಐಪಿಎಲ್ ವೃತ್ತಿಜೀವನದಲ್ಲಿ, ಅವರು 117 ಪಂದ್ಯಗಳಲ್ಲಿ 156.73 ಸ್ಟ್ರೈಕ್ ರೇಟ್ ಮತ್ತು 26.52 ಸರಾಸರಿಯೊಂದಿಗೆ 2,572 ರನ್ ಗಳಿಸಿದ್ದಾರೆ. ಅವರು 210 ಬೌಂಡರಿಗಳು ಮತ್ತು 150 ಸಿಕ್ಸರ್‌ಗಳೊಂದಿಗೆ 16 ಅರ್ಧಶತಕಗಳನ್ನು ಹೊಂದಿದ್ದರು. ಆರ್ಸಿಬಿಗಾಗಿ 2021ರ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು 15 ಪಂದ್ಯಗಳಲ್ಲಿ 513 ರನ್ ಗಳಿಸಿದ್ದ ಮ್ಯಾಕ್ಸಿ 42.75 ಸರಾಸರಿಯಲ್ಲಿ 144.10 ಸ್ಟ್ರೈಕ್ ರೇಟ್ನಿಂದ 48 ಬೌಂಡರಿ ಮತ್ತು 21 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಆರ್‌ಸಿಬಿ ಸೇರುವುದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ನಲ್ಲಿ 2014 ರ ಆವೃತ್ತಿಯಲ್ಲಿ 16 ಪಂದ್ಯಗಳಲ್ಲಿ ನಾಲ್ಕು ಅರ್ಧ ಶತಕಗಳೊಂದಿಗೆ 552 ರನ್ ಗಳಿಸಿದ್ದರು. ಆ ಆವೃತ್ತಿಯಲ್ಲಿ ಮ್ಯಾಕ್ಸ್ ವೆಲ್ 34.50 ಸರಾಸರಿಯಲ್ಲಿ 187.75 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. 2021ರ ಹರಾಜಿನಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ಖರೀದಿಸಿತ್ತು ಮತ್ತು ಅಂದಿನಿಂದ ಅವರು ತಂಡಕ್ಕೆ ಪ್ರಮುಖ ಬ್ಯಾಟರ್ ಆಗಿದ್ದಾರೆ.
ಟ್ರೆಂಟ್ ಬೌಲ್ಟ್ ಶತಕ ವಿಕೆಟ್ ಸಾಧನೆ: ರಾಜಸ್ಥಾನ್ ರಾಯಲ್ಸ್ (RR) ವೇಗಿ ಟ್ರೆಂಟ್ ಬೌಲ್ಟ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 100 ವಿಕೆಟ್ ಪೂರೈಸಿದರು. ಇನ್ನಿಂಗ್ಸ್‌ನ ಆರಂಭಿಕ ಎಸೆತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬಲಗೈ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಗೋಲ್ಡನ್ ಡಕ್ಗೆ ಔಟ್ ಮಾಡುವ ಮೂಲಕ ಬೌಲ್ಟ್ ಈ ಮೈಲಿಗಲ್ಲು ಸಾಧಿಸಿದರು. ಟ್ರೆಂಟ್ ಬೌಲ್ಟ್ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿರುವುದು ಇದೇ ಮೊದಲನೇಯ ಬಾರಿಯಾಗಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ಗ್ಲೆನ್ ಮ್ಯಾಕ್ಸ್‌ವೆಲ್ (77) ಮತ್ತು ಫಾಫ್ ಡು ಪ್ಲೆಸಿಸ್ (62) ಅವರ ಬ್ಯಾಟಿಂಗ್ ಬಲದಿಂದ 189 ರನ್ ಗಳಿಸಿತ್ತು. ಇದನ್ನು ಬೆನ್ನು ಹತ್ತಿದ ರಾಜಸ್ಥಾನ ರಾಯಲ್ಸ್ ಯಶಸ್ವಿ ಜೈಸ್ವಾಲ್ ಮತ್ತು ದೇವದತ್ ಪಡಿಕಲ್ ಅವರ ಸ್ಕೂರ್ ಸಹಾಯದಿಂದ 182 ರನ್ ಗಳಿಸಲಷ್ಟೇ ಶಕ್ತವಾಗಿಯಿತು. 6 ವಿಕೆಟ್ ಕಳೆದುಕೊಂಡ ತಂಡ 7 ರನ್ ಸೋಲನುಭವಿಸಿತು.
ಇದನ್ನೂ ಓದಿ:RCB vs RR: ರಾಯಲ್ಸ್ ಮಣಿಸಿದ ರಾಯಲ್ ಚಾಲೆಂಜರ್ಸ್, ಆರ್ಆರ್ ವಿರುದ್ಧ 7 ರನ್ ಗೆಲುವು