ಅಹಮದಾಬಾದ್ (ಗುಜರಾತ್):ಮುಂದಿನ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಬೇಕಾದರೆ ನನ್ನ ದೇಹ ಅದಕ್ಕೆ ಸಹಕರಿಸಬೇಕು. ಅಭಿಮಾನಿಗಳ ಪ್ರೀತಿ ನೋಡಿದರೆ ಅವರಿಗೆ ಮತ್ತೊಂದು ಐಪಿಎಲ್ ಸೀಸನ್ ಉಡುಗೊರೆಯಾಗಿ ಕೊಡಬೇಕೆಂಬ ಆಸೆಯೂ ಇದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಹೇಳಿದರು. ನಿನ್ನೆ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಫೈನಲ್ ಪಂದ್ಯ ಗೆದ್ದ ಬಳಿಕ ಅವರು ಮಾತನಾಡಿದರು.
ಅಹಮದಾಬಾದ್ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಗುಜರಾತ್ ವಿರುದ್ಧ ಚೆನ್ನೈ ಗೆಲುವು ದಾಖಲಿಸಿ 5 ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಮೂಲಕ ಮುಂಬೈ ಸಾಧನೆಯನ್ನು ಸರಿಗಟ್ಟಿತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಧೋನಿ ಮಾತನಾಡುತ್ತಾ, "ಐಪಿಎಲ್ಗೆ ನಿವೃತ್ತಿ ಹೇಳಲು ಇದು ಉತ್ತಮ ಸಮಯವೆಂದು ನನಗೆ ಅನ್ನಿಸುತ್ತಿದೆ. ಕಷ್ಟಪಟ್ಟು ಹೆಚ್ಚು ಐಪಿಎಲ್ ಆಡುವುದಕ್ಕಿಂತ ನಿವೃತ್ತಿ ಹೇಳುವುದು ಸುಲಭ. ಆದರೆ, ಅಭಿಮಾನಿಗಳಿಂದ ಪಡೆದ ಪ್ರೀತಿಯನ್ನು ನೋಡಿ, ಅವರಿಗೆ ಮತ್ತೊಂದು ಸೀಸನ್ ಅನ್ನು ಉಡುಗೊರೆಯಾಗಿ ನೀಡಬೇಕೆಂಬ ಆಸೆಯೂ ಇದೆ. ಆದರೆ ನನ್ನ ದೇಹಕ್ಕೆ ಇದು ಸವಾಲಿನ ಪ್ರಶ್ನೆಯೂ ಹೌದು" ಎಂದು ತಿಳಿಸಿದರು.
ಐಪಿಎಲ್‌ಗಾಗಿ ಒಂಬತ್ತು ತಿಂಗಳು ಕಾಲ ಕಠಿಣ ಪರಿಶ್ರಮ ಮತ್ತು ಪ್ರಯತ್ನ ನಡೆಸಿ ದೇಹವನ್ನು ಸದೃಢವಾಗಿ ಇಟ್ಟುಕೊಳಳ ಬೇಕಾಗಿದೆ. ಈ ಪ್ರಯತ್ನವನ್ನು ಕಾರ್ಯಗತಗೊಳಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು 6 ರಿಂದ 7 ತಿಂಗಳುಗಳ ಸಮಯ ಇದೆ. ಈ ಮೂಲಕ ಮುಂದಿನ ಸೀಸನ್ಗೆ ಫಿಟ್ ಆಗಿದ್ದರೆ ಮಾತ್ರ ಆಡುವುದಾಗಿ ಎಂ.ಎಸ್. ಧೋನಿ ತಿಳಿಸಿದ್ದಾರೆ.