ನವದೆಹಲಿ: ವೀಕೆಂಡ್ ಐಪಿಎಲ್ ಡಬಲ್ ಹೆಡರ್ ಮನರಂಜನೆಯ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗುತ್ತಿದೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ 16ನೇ ಆವೃತ್ತಿಯ 50ನೇ ಪಂದ್ಯಕ್ಕೆ ಸಜ್ಜಾಗಿದೆ. ವಿರಾಟ್ ಕೊಹ್ಲಿ ತಮ್ಮ ತವರೂರಿನ ಅಂಗಳಕ್ಕೆ ಮರಳಿದ್ದು, ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅವರು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಆವೃತ್ತಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಮೊದಲ ಬಾರಿಗೆ ಎದುರಾದಾಗ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಡೆಲ್ಲಿ 23 ರನ್ ಸೋಲು ಕಂಡಿದ್ದು, ಇದು ವಾರ್ನರ್ ಪಡೆಗೆ ಸತತ ಐದನೇ ಸೋಲಾಗಿತ್ತು. ಇದುವರೆಗೆ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 9 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಕೇವಲ ಮೂರರಲ್ಲಿ ಗೆಲುವು ಕಂಡಿದೆ. ಪ್ಲೇ ಆಫ್ ಕನಸು ಒಂದು ಸೋಲು ಕಂಡರು ಕಷ್ಟ ಎಂದು ಹೇಳಬಹುದು. ಹೀಗಾಗಿ ಆರ್‌ಸಿಬಿ ಮೇಲೆ ಗೆಲುವು ಅಗತ್ಯವಾಗಿದೆ.
ಡೆಲ್ಲಿ ಕಳೆದ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ಅನ್ನು ಮಣಿಸಿದೆ. ಈ ಗೆಲುವು ತಂಡಕ್ಕೆ ಇನ್ನಷ್ಟೂ ಬಲವನ್ನು ಕೊಟ್ಟಿದೆ. ಇಂದು ತವರು ಪ್ರೇಕ್ಷಕರ ಎದುರು ಆಡುವಾಗ ಉತ್ತಮ ಗೇಮ್ ತಂಡದಿಂದ ಬರುವ ನಿರೀಕ್ಷೆ ಇದೆ. ಅದರಂತೆ ಡೇವಿಡ್ ಪಡೆ ಸಜ್ಜಾಗಿದೆ. ಬ್ಯಾಟಿಂಗ್ ನಲ್ಲಿ ತಂಡ ಸುಧಾರಿಸಿಕೊಳ್ಳಲಿದ್ದರು ಬೌಲಿಂಗ್ನ್ನು ನೆಚ್ಚಿಕೊಂಡಿದೆ. ಖಲೀಲ್ ಅಹಮದ್, ಇಶಾಂತ್ ಶರ್ಮಾ ಮತ್ತು ಕುಲ್ದೀಪ್ ಯಾದವ್ ತಂಡಕ್ಕೆ ಬೌಲಿಂಗ್ ಬಲವಾಗಿದ್ದಾರೆ.
ಇದುವರೆಗೆ ಆರ್‌ಸಿಬಿ ತಂಡವು ಒಂಬತ್ತು ಪಂದ್ಯಗಳನ್ನು ಆಡಿ ಐದರಲ್ಲಿ ಜಯಿಸಿ, ನಾಲ್ಕರಲ್ಲಿ ಸೋತಿದೆ. ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶಿಸಲು ಡೆಲ್ಲಿ ವಿರುದ್ಧ ಸೇರಿದಂತೆ ಉಳಿದೆಲ್ಲ ಪಂದ್ಯಗಳಲ್ಲಿಯೂ ಜಯಿಸುವ ಒತ್ತಡ ಆರ್‌ಸಿಬಿಯ ಮೇಲಿದೆ. ಬ್ಯಾಟಿಂಗ್ನಲ್ಲಿ ತ್ರಿವಳಿ ಆಟಗಾರು ಮಾತ್ರ ಆಡುತ್ತಿರುವುದು ತಂಡಕ್ಕೆ ಕಾಡುತ್ತಿರುವ ತಲೆನೋವಾಗಿದೆ, ಮಧ್ಯಮ ಮತ್ತು ಕೆಳಕ್ರಮಾಂಕ ಅರ್ಧ ಆವೃತ್ತಿ ಮುಗಿದರೂ ಲಯಕ್ಕೆ ಮರಳುತ್ತಿಲ್ಲ.
ವಿರಾಟ್ಗೆ ತವರು ಮೈದಾನದ ಲಾಭ: ವಿರಾಟ್ ಕೊಹ್ಲಿಗೆ ಡೆಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ತವರು ಮೈದಾನವಾಗಿದೆ. ಈ ಆವೃತ್ತಿಯಲ್ಲಿ ಆಡಿರುವ 9 ಪಂದ್ಯದಲ್ಲಿ 137.55ರ ಸ್ಟ್ರೈಕ್ರೇಟ್ನಲ್ಲಿ 5 ಅರ್ಧಶತಕದಿಂದ 364 ರನ್ನನ್ನು ವಿರಾಟ್ ಕಲೆಹಾಕಿದ್ದಾರೆ. ಇಂದು ಹೋಮ್ ಗ್ರೌಂಡ್ನಲ್ಲಿ ವಿರಾಟ್ ಬ್ಯಾಟ್ನಿಂದ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.