ನವದೆಹಲಿ : ಪ್ರಸಕ್ತ ಐಪಿಎಲ್ ಟೂರ್ನಿಯ 28ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಇಂದು ಮುಖಾಮುಖಿಯಾಗುತ್ತಿವೆ. ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ದುಕೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಮಳೆಯಿಂದಾಗಿ ಟಾಸ್ ವಿಳಂಬವಾಗಿತ್ತು.
ಸತತ 5 ಸೋಲಿನಿಂದ ಕಂಗೆಟ್ಟಿರುವ ಡೆಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಯಾವುದೇ ಅಂಕ ಗಳಿಸದ ತಂಡ ಕೊನೆ ಸ್ಥಾನದಲ್ಲಿದೆ. ಇನ್ನುಳಿದಿರುವ 9 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಕನಸು ಜೀವಂತವಾಗಲಿದೆ.
ಕಳೆದ ಶನಿವಾರ ಡೆಲ್ಲಿ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 23 ರನ್‌ಗಳಿಂದ ಸೋಲು ಅನುಭವಿಸಿತ್ತು. ಬೆಂಗಳೂರು ನೀಡಿದ್ದ 174 ರನ್ಗಳ ಗುರಿ ಬೆನ್ನತ್ತಲು ಸಾಧ್ಯವಾಗದೇ ಡೆಲ್ಲಿ ಸೋಲು ಅನುಭವಿಸಿತ್ತು.
ತಂಡದ ನಿರ್ದೇಶಕ ಸೌರವ್ ಗಂಗೂಲಿ ಪ್ರತಿಕ್ರಿಯಿಸಿ, ಐದು ಪಂದ್ಯಗಳ ಸೋಲಿನ ನಂತರ ಪುಟಿದೇಳುವುದಾಗಿ ಹೇಳಿದ್ದರು. ನಮ್ಮ ಮುಂದೆ ಇನ್ನೂ ಒಂಬತ್ತು ಪಂದ್ಯಗಳಿವೆ. ನಾವು ಎಲ್ಲಾ ಪಂದ್ಯವನ್ನೂ ಗೆಲ್ಲಬಹುದು. ಈ ಸಂದರ್ಭದಲ್ಲಿ ನಾವು ಕ್ವಾಲಿಫೈ ಆಗುತ್ತೇವೋ, ಇಲ್ಲವೋ ಎಂಬುದನ್ನು ಚಿಂತಿಸಬಾರದು ಎಂದು ಹೇಳಿದ್ದರು.