ನವದೆಹಲಿ:ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ ಬೃಹತ್ ಮೊತ್ತವನ್ನು ಪೇರಿಸಲಾಗದೆ ಡೆಲ್ಲಿ ಕ್ಯಾಪಿಟಲ್ಸ್ ಮಣಿಯಿತು. ಇದರಿಂದ ಧೋನಿ ನಾಯಕತ್ವದ ಚೆನ್ನೈ ಪ್ಲೇ ಆಫ್ ಪ್ರವೇಶ ಪಡೆದುಕೊಂಡಿದ್ದು, ಈ ಆವೃತ್ತಿಯ ಎರಡನೇ ತಂಡವಾಗಿದೆ. ಹಳದಿ ಪಡೆ 224 ರನ್ ಗುರಿ ನೀಡಿತ್ತು. ಇದನ್ನು ಬೆನ್ನು ಹತ್ತಿದ ಡೆಲ್ಲಿ ನಿಗದಿತ ಓವರ್ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 146 ರನ್ ಮಾತ್ರ ಗಳಿಸಿತು. ಇದರಿಂದ ಚೆನ್ನೈ 77 ರನ್ ದೊಡ್ಡ ಗೆಲುವು ದಾಖಲಿಸಿತು.
ಡೆಲ್ಲಿ ಈ ಆವೃತ್ತಿಯ ಉದ್ದಕ್ಕೂ ಬ್ಯಾಟಿಂಗ್ ವೈಫಲ್ಯವನ್ನು ಎದುರಿಸಿಕೊಂಡೇ ಬಂದಿದೆ. ಇಂದು ಸಹ ಮತ್ತೆ ಚೆನ್ನೈ ಬೌಲರ್ಗಳ ಮುಂದೆ ಡೆಲ್ಲಿ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಮಾತ್ರ ಏಕಾಂಗಿ ಆಟ ಪ್ರದರ್ಶಿಸಿದರು. ಅವರ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ 100 ರನ್ ಗಡಿ ದಾಟಿತು. ವಾರ್ನರ್ 58 ಬಾಲ್ನಲ್ಲಿ 5 ಸಿಕ್ಸ್ ಮತ್ತು 7 ಬೌಂಡರಿಯಿಂದ 86 ರನ್ ಕಲೆಹಾಕಿ 14 ರನ್ನಿಂದ ಶತಕ ವಂಚಿತರಾದರು. ಉಳಿದಂತೆ ಅಕ್ಷರ್ ಪಟೇಲ್ 15 ಮತ್ತು ಯಶ್ ಧುಲ್ 13 ರನ್ ಗಳಿಸಿದ್ದೇ ಹೆಚ್ಚಿನ ಸ್ಕೋರ್ ಆಗಿತ್ತು.
ಆರಂಭಿಕ ಆಟಗಾರ ಪೃಥ್ವಿ ಶಾ ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಭರವಸೆ ಮೂಡಿಸಿದ್ದರೆ, ಈ ಪಂದ್ಯದಲ್ಲಿ 5 ರನ್ ಔಟ್ ಆದರು. ಆವರಂತೆ ಒಂದಂಕಿಗೆ 6 ಜನ ವಿಕೆಟ್ ಕೊಟ್ಟರು. ಫಿಲಿಪ್ ಸಾಲ್ಟ್ 3, ರಿಲೀ ರೋಸೊವ್ 0, ಅಮನ್ ಹಕೀಮ್ ಖಾನ್ 7, ಲಲಿತ್ ಯಾದವ್ 6 ಮತ್ತು ಕುಲದೀಪ್ ಯಾದವ್ ಶೂನ್ಯಕ್ಕೆ ವಿಕೆಟ್ ಕೊಟ್ಟರು. ಚೆನ್ನೈ ಪರ ದೀಪಕ್ ಚಹಾರ್ 3, ತೀಕ್ಷ್ಣ ಮತ್ತು ಪಥಿರಣ 2 ವಿಕೆಟ್ ಪಡೆದರೆ, ಜಡೇಜಾ ಹಾಗೂ ದೇಶ ಪಾಂಡೆ ಒಂದೊಂದು ವಿಕೆಟ್ ಉರುಳಿಸಿದರು.
ಇದಕ್ಕೂ ಮುನ್ನ ಪ್ಲೇ ಆಫ್ ಪ್ರವೇಶದ ಮಹತ್ವದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ಆರಂಭಿಕ ಜೊತೆಗಾರರು ಮತ್ತೊಂದು ಬೃಹತ್ ರನ್ನ ಜೊತೆಯಾಟ ನೀಡಿದ್ದಾರೆ. ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ಅವರ ಮೊದಲ ವಿಕೆಟ್ಗೆ 141 ರನ್ನ ಕಲೆಹಾಕಿದರು. ಈ ಮೂಲಕ ಐಪಿಎಲ್ನಲ್ಲಿ 4ನೇ ಬಾರಿಗೆ ಶತಕದ ಜೊತೆಯಾಟವನ್ನು ಈ ಜೋಡಿ ಮಾಡಿತು. ಇವರ ಬ್ಯಾಟಿಂಗ್ ನೆರವಿನಿಂದ ಚೆನ್ನೈ ನಿಗದಿತ ಓವರ್ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 223 ರನ್ ಹಾಕಿತು. ಡೆಲ್ಲಿ ಪಂದ್ಯ ಗೆಲ್ಲಲು 224 ರನ್ ಗಳಿಸಬೇಕಿತ್ತು. ಆದರೆ, ಅಷ್ಟು ರನ್ಗಳನ್ನು ಗಳಿಸಲು ವಿಫಲವಾಗಿ ಸೋಲು ಅನುಭವಿಸಿ ಐಪಿಎಲ್ ಸ್ಪರ್ಧೆಯಿಂದ ಹೊರ ಹೋಯಿತು.