ಚೆನ್ನೈ: ನಿನ್ನೆ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್ ಗೆಲುವು ಪಡೆದಿದೆ. ಈ ಪಂದ್ಯ ಟೈ ಆಗಿದ್ದು ಸೂಪರ್ ಓವರ್‌ನಲ್ಲಿ ಡೆಲ್ಲಿ ತಂಡ ಗೆದ್ದು ಬೀಗಿತು.
160 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಆರಂಭದಲ್ಲೇ ನಾಯಕ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡಿತು. ಅವರು 6 ರನ್ ಗಳಿಸಿ ರನೌಟ್ ಆದರು. ಜಾನಿ ಬೈರ್‌ಸ್ಟೋ ಹಾಗೂ ಕೇನ್ ವಿಲಿಯಮ್ಸನ್ ಜೊತೆಯಾಟದಿಂದ ಹೈದರಾಬಾದ್ ಚೇತರಿಸಿಕೊಂಡಿತು.
ಬೈರ್‌ಸ್ಟೋ 38 ರನ್ ಕಾಣಿಕೆ ನೀಡಿದರು. ಇತ್ತ ವಿಲಿಯಮ್ಸನ್ ಏಕಾಂಗಿ ಹೋರಾಟ ಮುಂದುವರಿಸಿದರು. ಆದರೆ ವಿಲಿಯಮ್ಸನ್‌ಗೆ ಇತರ ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ವಿರಾಟ್ ಸಿಂಗ್, ಕೇದಾರ್ ಜಾದವ್, ಅಭಿಶೇಕ್ ಶರ್ಮಾ ಬಂದ ದಾರಿಗೆ ಸುಂಕವಿಲ್ಲದಂತೆ ಪೆವಿಲಿಯನ್ ಸೇರಿದರು.
ಅಂತಿಮವಾಗಿ ಕೇನ್ ವಿಲಿಯಮ್ಸನ್ ಹಾಗೂ ಜೆ.ಸುಚಿತ್ ಹೋರಾಟ ನಡೆಸಿ ಅಂತಿಮ ಓವರ್ವರೆಗೂ ಪಂದ್ಯವನ್ನು ತಂದು ನಿಲ್ಲಿಸಿದರು. ಹೈದರಾಬಾದ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ 15 ರನ್ ಅವಶ್ಯಕತೆ ಇತ್ತು ಸುಚಿತ್ ಸಿಕ್ಸರ್, ವಿಲಿಯಮ್ಸನ್ ಬೌಂಡರಿಯಿಂದ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿ ಪಂದ್ಯ ಟೈ ಮಾಡಿಕೊಂಡಿತು. ಹೀಗಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ 8 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ, 6ನೇ ಎಸೆತದಲ್ಲಿ 2ನೇ ರನ್ ಕದಿಯುವಾಗ ಡೇವಿಡ್ ವಾರ್ನರ್ ಕ್ರೀಸ್ ಮುಟ್ಟದೇ ಇದ್ದ ಕಾರಣಕ್ಕೆ ಸನ್‌ರೈಸರ್ಸ್ ಖಾತೆಯಿಂದ ಒಂದು ರನ್ ಕಡಿತ ಗೊಳಿಸಲಾಯಿತು. ಗೆಲ್ಲಲು 8 ರನ್ ಗುರಿ ಪಡೆದಿದ್ದ ಕ್ಯಾಪಿಟಲ್ಸ್ ಪರ ರಿಷಭ್ ಪಂತ್ ಮತ್ತು ಶಿಖರ್ ಧವನ್ ಬ್ಯಾಟಿಂಗ್‌ಗೆ ಇಳಿದರು. ಆದರೆ ರಶೀದ್ ಖಾನ್ ಬೌಲಿಂಗ್ ಎದುರಿಸಲು ಸ್ವಲ್ಪ ತಡಕಾಡಿದರು. ಕೊನೆಯ ಎರಡೂ ಎಸೆತದಲ್ಲಿ ಕ್ಯಾಪಿಟಲ್ಸ್ ಲೆಗ್ ಬೈ ಮೂಲಕವೇ ರನ್ ಕದ್ದು ಜಯ ದಕ್ಕಿಸಿಕೊಂಡಿತು.
ಇದನ್ನೂ ಓದಿ: ಪೃಥ್ವಿ ಶಾ ಅರ್ಧಶತಕ : ಹೈದರಾಬಾದ್ಗೆ 160 ರನ್ಗಳ ಗುರಿ ನೀಡಿದ ಕ್ಯಾಪಿಟಲ್ಸ್