ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಶೇಷ ಪ್ರಶಸ್ತಿ ಪರಿಚಯ ಮಾಡಿದೆ. ತಂಡದ ಪರ ಅತಿ ಹೆಚ್ಚು ವರ್ಷಗಳ ಕಾಲ ಆಟವಾಡಿರುವ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹಾಗೂ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಅವರು ಚೊಚ್ಚಲ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ. 'ಹಾಲ್ ಆಫ್ ಫೇಮ್' ಎಂಬ ಹೆಸರಿನಲ್ಲಿ ಪ್ರಶಸ್ತಿ ಪರಿಚಯ ಮಾಡಿರುವ ಆರ್ಸಿಬಿ, ಖಾಸಗಿ ಹೋಟೆಲ್ನಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ದಿಗ್ಗಜ ಆಟಗಾರರೊಂದಿಗೆ ಸಂವಾದ ಸಹ ನಡೆಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸದ್ಯ 5ನೇ ಸ್ಥಾನದಲ್ಲಿರುವ ಆರ್ಸಿಬಿ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿ, ಪ್ಲೇ-ಆಫ್ ರೇಸ್ಗೆ ಲಗ್ಗೆ ಹಾಕುವ ಇರಾದೆ ಇಟ್ಟುಕೊಂಡಿದೆ. ಈ ಮಧ್ಯೆ ಆರ್ಸಿಬಿ ಪರ ಸುಮಾರು 11 ವರ್ಷಗಳ ಕಾಲ(2011-2021) ಆಡಿರುವ ಎಬಿಡಿ, ಹಾಗೂ 7 ವರ್ಷಗಳ ಕಾಲ ಆಡಿರುವ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ಗೆ(2011-2017) ಹಾಲ್ ಆಫ್ ಫೇಮ್ ಚೊಚ್ಚಲ ಪ್ರಶಸ್ತಿ ಘೋಷಣೆ ಮಾಡಿ, ಗೌರವಿಸಲಾಗಿದೆ. ಆರ್ಸಿಬಿ ಪರ ಈ ಇಬ್ಬರು ಪ್ಲೇಯರ್ಸ್ ಅನೇಕ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ, ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ.