ಶಾರ್ಜಾ (ದುಬೈ): ಐಪಿಎಲ್ ಸೀಸನ್-14ರ ಇಂದಿನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿರುವ ಡೆಲ್ಲಿ ಇಂದಿನ ಪಂದ್ಯ ಗೆದ್ದು ಫೈನಲ್ ತಲುಪುವ ನಿರೀಕ್ಷೆಯಲ್ಲಿದೆ. ಆದರೆ ಕೆಕೆಆರ್ ತಂಡ ಡೆಲ್ಲಿಯನ್ನು ಮಣಿಸಿ 3ನೇ ಬಾರಿ ಪ್ರಶಸ್ತಿ ಸುತ್ತಿಗೆ ದಾಪುಗಾಲಿಡುವ ತವಕದಲ್ಲಿದೆ.
ಉಭಯ ತಂಡಗಳ ಸಾಧನೆ ನೋಡಿದರೆ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿರುವ ಡೆಲ್ಲಿ ತಂಡ ಬಲಿಷ್ಟವಾಗಿ ಕಾಣುತ್ತದೆ. ಡೆಲ್ಲಿ ಲೀಗ್ನಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಸೋತು ಒಟ್ಟು 20 ಅಂಕ ತನ್ನದಾಗಿಸಿಕೊಂಡಿದೆ. ಇನ್ನೊಂದೆಡೆ, ಕೆಕೆಆರ್ ಆಡಿದ 14ರಲ್ಲಿ 7ರಲ್ಲಿ ಗೆದ್ದು ಮತ್ತೇಳರಲ್ಲಿ ಮುಗ್ಗರಿಸಿದ್ದು, ಒಟ್ಟು 14 ಅಂಕ ಪಡೆದಿದೆ.
ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಯುವಪಡೆ ಬ್ಯಾಟಿಂಗ್ ತಂಡಕ್ಕೆ ಬಲ ನೀಡುತ್ತಿದೆ. ಆರಂಭಿಕರಾದ ಶಿಖರ್ ಧವನ್ ಪೃಥ್ವಿ ಶಾ ಉತ್ತಮ ಫಾರ್ಮ್ ಹೊಂದಿದ್ದು ತಂಡ ಬೃಹತ್ ಮೊತ್ತ ಕಲೆ ಹಾಕುವಲ್ಲಿ ನೆರವಾಗುತ್ತಿದ್ದಾರೆ. ಬಳಿಕ ರಿಷಬ್ ಪಂತ್, ಶ್ರೇಯಸ್ ಐಯ್ಯರ್ ಜೊತೆ ಶಿಮ್ರಾನ್ ಹೆಟ್ಮಾಯರ್ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದು, ಬೌಲಿಂಗ್ ವಿಭಾಗದಲ್ಲಿ ಕಗಿಸೊ ರಬಾಡ, ಅನ್ರಿಚ್ ನೋಕಿಯಾ ಹಾಗು ಆವೇಶ್ ಖಾನ್ ಎದುರಾಳಿಗಳನ್ನು ಕಾಡಲಿದ್ದಾರೆ.
ಕೆಕೆಆರ್ ತಂಡದಲ್ಲಿ ಆರಂಭಿಕರ ಅಬ್ಬರ ಮುಂದುವರಿದಿದೆ. ವೆಂಕಟೇಶ್ ಐಯ್ಯರ್ ಜೊತೆ ಶುಭ್ಮನ್ ಗಿಲ್ ಪ್ಲೇ ಆಫ್ನಲ್ಲಿ ರನ್ ಹೊಳೆ ಹರಿಸುತ್ತಿದ್ದಾರೆ. ರಾಹುಲ್ ತ್ರಿಪಾಠಿ, ನಿತಿಶ್ ರಾಣಾ ತಂಡಕ್ಕೆ ಸಾಥ್ ನೀಡುತ್ತಿದ್ದಾರೆ. ಬೌಲಿಂಗ್ನಲ್ಲಿ ಸುನಿಲ್ ನರೈನ್, ಶಿವಂ ಮಾವಿ ಹಾಗು ವರುಣ್ ಚಕ್ರವರ್ತಿ ಮಿಂಚಿನ ದಾಳಿ ನಡೆಸಿ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ.