ನವದೆಹಲಿ: ಸುದೀರ್ಘ ವಿಶ್ರಾಂತಿಯಲ್ಲಿರುವ ವಿಕೆಟ್ ಕೀಪರ್ ರಿಷಬ್ ಪಂತ್ ಅವರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪಂತ್, ಸದ್ಯಕ್ಕೆ ಕ್ರೀಡಾಂಗಣಕ್ಕೆ ಇಳಿಯುವುದು ಅನುಮಾನ. ಅಲ್ಲದೇ ವೈದ್ಯರು ಅವರಿಗೆ ಸುದೀರ್ಘ ವಿಶ್ರಾಂತಿ ಬೇಕಿದೆ ಎಂದಿದ್ದಾರೆ. ಹಾಗಾಗಿ ಅವರ ಜಾಗ ತುಂಬಲು ಮುಂದಾಗಿರುವ ದೆಹಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಡೇವಿಡ್ ವಾರ್ನರ್ ಅವರನ್ನು ನಾಯಕನನ್ನಾಗಿ ಮಾಡಿದೆ.
"ತಂಡ ಮುನ್ನಡೆಸಲು ಆಸೀಸ್ ತಾರೆ ಡೇವಿಡ್ ವಾರ್ನರ್ ಅತ್ಯುತ್ತಮ ವ್ಯಕ್ತಿ" ಎಂದು ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ತಂಡದ ಆಡಳಿತ ಮಂಡಳಿ ಸಹಮತ ಸೂಚಿಸಿದ್ದಾರೆ. "ಗಾಯದಿಂದ ಚೇತರಿಸುತ್ತಿರುವ ಪಂತ್ ಐಪಿಎಲ್ 2023 ಟೂರ್ನಿಯಿಂದ ಸಂಪೂರ್ಣ ಹೊರಗುಳಿಯಲಿದ್ದಾರೆ. ಅನಿವಾರ್ಯವಾಗಿ ತಂಡ ಹಂಗಾಮಿ ನಾಯಕನನ್ನು ಎದುರು ನೋಡಬೇಕಾಯಿತು. 2022ರಲ್ಲಿ ಉಪನಾಯಕರಾಗಿ ಬಡ್ತಿ ಪಡೆದ ಅಕ್ಷರ್ ಪಟೇಲ್ ಈ ಬಾರಿಯೂ ತಂಡದ ಉಪನಾಯಕನಾಗಿ ಮುಂದುವರೆಯಲಿದ್ದಾರೆ" ಎಂದು ಆಡಳಿತ ಮಂಡಳಿ ಖಚಿತಪಡಿಸಿದೆ.
ಡೇವಿಡ್ ವಾರ್ನರ್ ದೆಹಲಿ ಕ್ಯಾಪಿಟಲ್ಸ್ ತಂಡ ಮುನ್ನಡೆಸುತ್ತಿರುವುದು ಇದು ಎರಡನೇ ಬಾರಿ. 2009 ಮತ್ತು 2013ರ ಅವಧಿಯಲ್ಲಿ ಒಂದೆರಡು ಪಂದ್ಯಗಳಲ್ಲಿ ನಾಯಕರಾಗಿದ್ದರು. 2014ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸೇರಿಕೊಂಡಿದ್ದ ವಾರ್ನರ್, 2016ರಲ್ಲಿ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಕೊಡುಗೆ ನೀಡಿದ್ದರು. ನಾಯಕರಾಗಿ ಒಟ್ಟು 69 ಪಂದ್ಯಗಳನ್ನು ಆಡಿರುವ ಇವರು, 35 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವುದು ಗಮನಾರ್ಹ. 32 ಪಂದ್ಯಗಳಲ್ಲಿ ಸೋತಿದ್ದು, ಎರಡು ಪಂದ್ಯಗಳನ್ನು ಟೈ ಮಾಡಿಕೊಂಡಿದ್ದಾರೆ.