ಕರ್ನಾಟಕ

karnataka

ETV Bharat / sports

'ಸಿಎಸ್​ಕೆ ಐಪಿಎಲ್ ​ರನ್ನರ್​ ಅಪ್​': ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ 'ಆ ಚಿತ್ರ' - ipl 2023

ಐಪಿಎಲ್​ ಫೈನಲ್​ ಹಣಾಹಣಿಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ಚಿತ್ರವೊಂದು ಹಲವು ಅನುಮಾನಗಳಿಗೆ ದಾರಿ ಮಾಡಿದೆ. ಪಂದ್ಯಕ್ಕೂ ಮೊದಲೇ ಸಿಎಸ್​​ಕೆ 'ರನ್ನರ್ ​ಅಪ್​' ಎಂಬ ಚಿತ್ರ ಹರಿದಾಡುತ್ತಿದೆ.

ಸಿಎಸ್​ಕೆ ಐಪಿಎಲ್ ​ರನ್ನರ್​ ಅಪ್
ಸಿಎಸ್​ಕೆ ಐಪಿಎಲ್ ​ರನ್ನರ್​ ಅಪ್

By

Published : May 29, 2023, 3:26 PM IST

ಅಹ್ಮದಾಬಾದ್​:ಮಳೆಯಿಂದಾಗಿ ನಿನ್ನೆಯ ಐಪಿಎಲ್​- 2023 ಫೈನಲ್​ ಪಂದ್ಯ ಸ್ಥಗಿತವಾಗಿತ್ತು. ಮೀಸಲು ದಿನವಾದ ಇಂದು ನಡೆಯಬೇಕಷ್ಟೆ. ಆದರೆ, ಪಂದ್ಯ ಆಯೋಜನೆಯಾಗಿರುವ ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದ ಎಲ್​ಇಡಿ ಪರದೆಯ ಮೇಲೆ ಮೂಡಿಬಂದ 'ಚೆನ್ನೈ ಸೂಪರ್​ ಕಿಂಗ್ಸ್​ ರನ್ನರ್​ ಅಪ್​' ಎಂಬ ಚಿತ್ರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪಂದ್ಯಕ್ಕೂ ಮೊದಲೇ ಸಿಎಸ್​ಕೆ ರನ್ನರ್​ ಅಪ್​ ಎಂದು ಪರದೆಯ ಮೇಲೆ ಹಾಕಿರುವುದು, ಮ್ಯಾಚ್​ ಫಿಕ್ಸಿಂಗ್​ ನಡೆದಿರಬಹುದಾ ಎಂದು ನೆಟ್ಟಿಗರು ಶಂಕಿಸಿದ್ದಾರೆ. ಆದರೆ, ಇದಕ್ಕೆ ಕ್ರೀಡಾಂಗಣದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಇದು ಎಲ್​ಇಡಿ ಪರದೆಯ ಪರಿಶೀಲನೆ ಮಾಡಿದ ಚಿತ್ರವಾಗಿದೆ. 'ಸಿಎಸ್​ಕೆ ವಿನ್ನರ್' ಅಂತ ಕೂಡ ಪ್ರದರ್ಶಿಸಲಾಗಿದೆ. ಇದು ಟ್ರೈಯಲ್​ ಅಷ್ಟೇ ಎಂದು ಹೇಳಿದ್ದಾರೆ.

ಅಷ್ಟಕ್ಕೂ ಏನಾಯ್ತು?:ಗುಜರಾತ್​ನ ಅಹ್ಮದಾಬಾದ್​ನಲ್ಲಿನ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಮೈದಾನದಲ್ಲಿ ಐಪಿಎಲ್​ನ ಫೈನಲ್​ ಪಂದ್ಯ ಆಯೋಜಿಸಲಾಗಿದೆ. ಚೆನ್ನೈ ಸೂಪರ್​ಕಿಂಗ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ತಂಡಗಳು ಪ್ರಶಸ್ತಿಗಾಗಿ ಅಂತಿಮ ಹೋರಾಟ ನಡೆಸಲಿದೆ. ನಿನ್ನೆ ಮಳೆ ಕಾರಣ ಪಂದ್ಯ ಮುಂದೂಡಲಾಗಿದೆ. ಇಂದು ಸಂಜೆ ಆಟ ಮುಂದುವರಿಯಲಿದೆ.

ಕ್ರೀಡಾಂಗಣದಲ್ಲಿ ಮಳೆ ಸುರಿಯುತ್ತಿದ್ದಾಗ ಕುತೂಹಲಕಾರಿಯಾಗಿ ಮೈದಾನದಲ್ಲಿ ಅಳವಡಿಸಲಾಗಿರುವ ಎಲ್​ಇಡಿ ಪರದೆಗಳಲ್ಲಿ ಮೂಡಿದ ಸಂದೇಶವೊಂದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರ ಮೇಲೆ 'ಚೆನ್ನೈ ಸೂಪರ್ ಕಿಂಗ್ಸ್ ರನ್ನರ್ ಅಪ್' ಎಂದು ಬರೆಯಲಾಗಿದ್ದು, ಸ್ಟ್ಯಾಂಡ್‌ನಲ್ಲಿದ್ದ ಅಭಿಮಾನಿಗಳು ಇದರ ಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಫೋಟೋಗಳು ವೈರಲ್ ಆಗಿವೆ.

ನೆಟ್ಟಿಗರಿಂದ ತರಾಟೆ:ಈ ಫೋಟೋ ನೋಡಿದ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಕಮೆಂಟ್​ಗಳನ್ನು ಹಾಕಿದ್ದಾರೆ. ಪಂದ್ಯ ನಡೆಯದಿದ್ದರೂ ಸಿಎಸ್​ಕೆ ರನ್ನರ್ ಅಪ್ ಎಂದು ಹೇಗೆ ಘೋಷಿಸಲಾಯಿತು. ಐಪಿಎಲ್ 2023ರ ಫೈನಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆಯೇ? ಎಂದು ಅನುಮಾನಿಸಿದ್ದಾರೆ.

ಆಯೋಜಕರ ಸ್ಪಷ್ಟನೆ ಏನು?:ಆದರೆ, ಈ ಘಟನೆ ಬಗ್ಗೆ ಪಂದ್ಯದ ಆಯೋಜಕರು ಹೇಳೋದೇ ಬೇರೆ. ಎಲ್‌ಇಡಿ ಪರದೆಯನ್ನು ಪರೀಕ್ಷಿಸುವಾಗ ಇದು ಸಂಭವಿಸಿದೆ. ಇಂತಹ ಪ್ರತಿಷ್ಠಿತ ಪಂದ್ಯಗಳಿಗೆ ಮುನ್ನ ಎಲ್​ಇಡಿಯ ಮೇಲೆ ಎರಡೂ ತಂಡಗಳ ವಿನ್ನರ್ ಮತ್ತು ರನ್ನರ್ ಅಪ್ ಘೋಷಣೆಯನ್ನು ಪರಿಶೀಲಿಸಲಾಗಿದೆ. ‘ರನ್ನರ್ ಸಿಎಸ್‌ಕೆ’ ಹೊರತಾಗಿ ‘ಸಿಎಸ್‌ಕೆ ವಿನ್ನರ್’ ಎಂಬ ಘೋಷಣೆಯನ್ನೂ ಹಾಕಲಾಗಿದೆ. ಅದೇ ರೀತಿ ಗುಜರಾತ್ ವಿನ್ನರ್ ಮತ್ತು ರನ್ನರ್ ಅಪ್ ಎಂದೂ ಪರದೆಯ ಮೇಲೆ ಹಾಕಲಾಗಿದೆ ಎಂದು ಸಂಘಟಕರು ಸ್ಪಷ್ಟನೆ ನೀಡಿದ್ದಾರೆ.

ಅಭಿಮಾನಿಗಳ ಏನಂದ್ರು?:ಈ ಚಿತ್ರವನ್ನು ಹಂಚಿಕೊಂಡಿರುವ ನೆಟ್ಟಿಗರು ಕಿಡಿಕಾರಿದ್ದಾರೆ. ಮ್ಯಾಚ್ ಫಿಕ್ಸಿಂಗ್‌ಗೆ ಇದೊಂದು ಅತ್ಯುತ್ತಮ ಉದಾಹರಣೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳ ಭಾವನೆಗಳೊಂದಿಗೆ ಆಟವಾಡಲಾಗಿದೆ ಎಂದು ನೆಟ್ಟಿಗನೊಬ್ಬ ಬರೆದುಕೊಂಡಿದ್ದಾನೆ. ಫೈನಲ್​ ಪಂದ್ಯ ಫಿಕ್ಸ್​ ಆಗಿದೆ. ಸಿಎಸ್​ಕೆ ರನ್​ರ್​ ಅಪ್​ ಆಗಿದೆ ಎಂದು ಅಳುವ ಇಮೋಜಿ ಸಹಿತ ಮತ್ತೊಬ್ಬ ನೋವು ತೋಡಿಕೊಂಡಿದ್ದಾನೆ. ಚಿತ್ರದಲ್ಲಿರುವುದು ನಿಜವೇ ಎಂದು ಇನ್ನೊಬ್ಬ ನೆಟ್ಟಿಗ ಪ್ರಶ್ನಿಸಿದ್ದಾನೆ.

ಏನಾಗುತ್ತೆ ಫೈನಲ್​ ಹಣಾಹಣಿ?:ಎರಡು ತಿಂಗಳಿಂದ ನಡೆದ ಐಪಿಎಲ್​ ಅಂತಿಮ ಸುತ್ತಿಗೆ ಬಂದಿದೆ. ಗುಜರಾತ್​, ಸಿಎಸ್​ಕೆ ಫೈನಲ್​ನಲ್ಲಿ ಮುಖಾಮುಖಿಯಾಗಿವೆ. ಸಿಎಸ್​ಕೆ ಗೆದ್ದರೆ ಐದನೇ ಬಾರಿ ಟ್ರೋಫಿ ಎತ್ತಿಹಿಡಿಯಲಿದೆ. ಗುಜರಾತ್​ ಸತತ ಎರಡನೇ ಕಪ್​ ಗೆಲ್ಲುವ ಉತ್ಸಾಹದಲ್ಲಿದೆ. ಪ್ರಶಸ್ತಿ ಯಾರ ಪಾಲಾಗಲಿದೆ ಎಂಬುದು ಇಂದು ರಾತ್ರಿ ಗೊತ್ತಾಗಲಿದೆ.

ಓದಿ:IPLನಲ್ಲಿ ಈ ರೋಚಕ ಕ್ಷಣಗಳನ್ನು ಮಿಸ್‌ ಮಾಡಿದ್ದೀರಾ? ಹಾಗಿದ್ರೆ, ಫೋಟೋ ಸಮೇತ ನೋಡಿ!

ABOUT THE AUTHOR

...view details