ಅಹ್ಮದಾಬಾದ್:ಭಾನುವಾರ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯ ಮಳೆಯಿಂದಾಗಿ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಧಾವಿಸಿದ್ದರು. ಆದರೆ, ವರುಣರಾಯ ಅವಕೃಪೆ ತೋರಿದ್ದು, ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತ್ತು. ಇದಲ್ಲದೇ, ತಮಿಳುನಾಡಿನಿಂದ ಬಂದಿದ್ದ ಸಿಎಸ್‌ಕೆ ಫ್ಯಾನ್ಸ್ ರೈಲ್ವೆ ನಿಲ್ದಾಣದಲ್ಲಿಯೇ ರಾತ್ರಿ ಕಳೆದಿರುವ ವಿಡಿಯೋ ವೈರಲ್ ಆಗಿದೆ.
ಸತತ ಮಳೆ ಸುರಿದ ಕಾರಣ ಒಂದೇ ಒಂದು ಎಸೆತವಿಲ್ಲದೇ ಫೈನಲ್ ಪಂದ್ಯವನ್ನು ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಯಿತು. ಗುಜರಾತ್ ಮತ್ತು ಚೆನ್ನೈ ತಂಡಗಳ ಅಭಿಮಾನಿಗಳು ನಿರಾಸೆಯಿಂದಲೇ ಕ್ರೀಡಾಂಗಣದಿಂದ ಮನೆಗಳಿಗೆ ತೆರಳಬೇಕಾಯಿತು. ಆದರೆ, ಚೆನ್ನೈನ ಕೆಲ ಅಭಿಮಾನಿಗು ನಿಜಕ್ಕೂ ತೊಂದರೆ ಅನುಭವಿಸಿದ್ದಾರೆ. ಪಂದ್ಯ ನೋಡಲು ಬಂದಿರುವ ಜನರು ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದೇ ರೈಲ್ವೆ ನಿಲ್ದಾಣದ ಬಯಲಲ್ಲಿ ಮಲಗಿರುವುದು ಕಂಡುಬಂದಿದೆ.
ರಾತ್ರಿಯಲ್ಲಿ ಸಿಎಸ್‌ಕೆ ಅಭಿಮಾನಿಗಳು ರೈಲ್ವೆ ನಿಲ್ದಾಣದಲ್ಲಿ ನೆಲದ ಮೇಲೆ ಹೊದಿಕೆಯಿಲ್ಲದೇ ಮಲಗಿರುವ ಕೆಲವು ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೀಸಲು ದಿನದಂದು ಅದೇ ಟಿಕೆಟ್‌ಗಳನ್ನು ಬಳಸಲು ಅಭಿಮಾನಿಗಳಿಗೆ ಅವಕಾಶ ನೀಡಿದೆ. ಹೀಗಾಗಿ ಫೈನಲ್ ಪಂದ್ಯವನ್ನು ನೋಡಲೇಬೇಕೆಂಬ ಹಠದಿಂದಾಗಿ ಫ್ಯಾನ್ಸ್ ಮನೆಗೆ ಮರಳದೇ ಅಲ್ಲಿಯೇ ಉಳಿದುಕೊಂಡಿದ್ದಾರೆ.
ಧೋನಿ ಮೇಲಿನ ಅಭಿಮಾನ:ಸಿಎಸ್‌ಕೆ ಜರ್ಸಿಯನ್ನು ಧರಿಸಿರುವ ಅಭಿಮಾನಿಗಳು ರೈಲ್ವೆ ನಿಲ್ದಾಣದ ನೆಲಹಾಸಿನ ಮೇಲೆಯೇ ಮಲಗಿರುವುದನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದು, ಬಹುಶಃ ಇವರೆಲ್ಲರೂ ನಾಯಕ ಮಹೇಂದ್ರ ಸಿಂಗ್ ಧೋನಿಯ ಅಪ್ಪಟ ಅಭಿಮಾನಿಗಳಾಗಿದ್ದಾರೆ. ಧೋನಿಗೆ ಇದು ಕೊನೆಯ ಪಂದ್ಯ ಮತ್ತು ಐಪಿಎಲ್ ಎಂದೇ ಹೇಳಲಾಗಿದೆ. ಹೀಗಾಗಿ ತಮ್ಮ ನೆಚ್ಚಿನ ನಾಯಕನಿಗೆ ಅದ್ಧೂರಿ ಬೀಳ್ಕೊಡುಗೆ ನೀಡುವುದಕ್ಕಾಗಿ ಫ್ಯಾನ್ಸ್ ಮಳೆ, ಚಳಿಯನ್ನು ಲೆಕ್ಕಿಸದೇ ರಾತ್ರಿ ಕಳೆದಿದ್ದಾರೆ.