ಅಹ್ಮದಾಬಾದ್(ಗುಜರಾತ್):ಐಪಿಎಲ್ 16ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಗುಜರಾತ್ ವಿರುದ್ಧ ಚೆನ್ನೈ ತಂಡ ಸೋಲು ಕಂಡಿದೆ. ಆದರೆ ಬ್ಯಾಟಿಂಗ್‌ನಲ್ಲಿ ಸಣ್ಣ ತಪ್ಪಿನಿಂದಾಗಿ ಸೋತಿದ್ದೇವೆ ಎಂದು ಸಿಎಸ್ಕೆ ನಾಯಕ ಧೋನಿ ಹೇಳಿದ್ದಾರೆ. ಇದೇ ವೇಳೆ ಅದ್ಬುತ ಇನ್ನಿಂಗ್ಸ್ ಆಡಿ ಶತಕದ ಸಮೀಪ ಬಂದ ರುತುರಾಜ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ IPL 2023 ರ ಸೀಸನ್ ಅನ್ನು ಸೋಲಿನೊಂದಿಗೆ ಪ್ರಾರಂಭಿಸಿತು. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ 5 ವಿಕೆಟ್ಗಳಿಂದ ಸೋಲು ಕಂಡಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ, ಬ್ಯಾಟಿಂಗ್‌ನಲ್ಲಿ ಮಾಡಿದ ತಪ್ಪೇ ಸೋಲಿಗೆ ಕಾರಣವಾಯಿತು ಎಂದು ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಆರ್ದ್ರತೆಯ ಪರಿಣಾಮದಿಂದಾಗಿ ಬ್ಯಾಟಿಂಗ್‌ನಲ್ಲಿ ಹೆಚ್ಚುವರಿ ರನ್ ಗಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಪಂದ್ಯದ ನಂತರ ಮಾತನಾಡಿದ ಧೋನಿ, ರುತುರಾಜ್ ಗಾಯಕ್ವಾಡ್ ಅವರ ಅಸಾಧಾರಣ ಬ್ಯಾಟಿಂಗ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸೋಲಿನ ರಹಸ್ಯ ಬಿಚ್ಚಿಟ್ಟ ಧೋನಿ ಇಬ್ಬನಿ ಇರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಬ್ಯಾಟಿಂಗ್‌ನಲ್ಲಿ ಹೆಚ್ಚುವರಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಇನ್ನು 15-20 ರನ್ ಗಳಿಸಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು. ರುತುರಾಜ್ ಗಾಯಕ್ವಾಡ್ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು ಚೆಂಡನ್ನು ಸಂಪೂರ್ಣವಾಗಿ ಸಮಯಕ್ಕೆ ತೆಗೆದುಕೊಂಡರು. ಅವರ ಬ್ಯಾಟಿಂಗ್ ಮನೋಜ್ಞವಾಗಿದೆ. ಅವರು ಆಡಿದ ರೀತಿ ಹಾಗೂ ಆಯ್ದುಕೊಂಡ ಹೊಡೆತಗಳು ಆಕರ್ಷಕವಾಗಿದ್ದವು. ರುತುರಾಜ್ ಅವರಂತಹ ಯುವ ಆಟಗಾರರು ಮಿಂಚುವುದು ಮುಖ್ಯ ಎಂದರು.
ಹಂಗರ್ಗೇಕರ್ ಕೂಡ ಅದ್ಭುತವಾಗಿ ಬೌಲಿಂಗ್ ಮಾಡಿದರು. ಪಂದ್ಯಾವಳಿ ಮುಂದುವರೆದಂತೆ ಅವರು ಸುಧಾರಿಸುತ್ತಾರೆ. ಕೆಲವು ತಪ್ಪುಗಳು ಪುನರಾವರ್ತನೆಯಾಗದಂತೆ ನಮ್ಮ ಬೌಲರ್‌ಗಳು ಖಚಿತಪಡಿಸಿಕೊಳ್ಳಬೇಕು. ಅದರಲ್ಲೂ ನೋಬಾಲ್ಸ್ ಕಡಿಮೆ ಮಾಡಬೇಕು. ಏಕೆಂದರೆ ನೋಬಾಲ್‌ಗಳು ನಮ್ಮ ಕೈಯಲ್ಲಿವೆ. ಅದೇನೇ ಇರಲಿ, ಇಂದು ನಮ್ಮ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಇಬ್ಬರು ಎಡಗೈ ಆಟಗಾರರನ್ನು ಹೊಂದಿರುವುದು ಉತ್ತಮ ಆಯ್ಕೆಯಾಗಿದೆ. ಅದಕ್ಕಾಗಿಯೇ ಎರಡನ್ನೂ ತೆಗೆದುಕೊಳ್ಳಲಾಗಿದೆ. ಶಿವಂ ಧುಬೆ ರೂಪದಲ್ಲಿ ಆಯ್ಕೆ ಇದ್ದರೂ ಅವರಿಗೆ ಬೌಲಿಂಗ್ ಮಾಡುವ ಅಗತ್ಯವಿಲ್ಲ ಎಂದು ಧೋನಿ ಹೇಳಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 178 ರನ್ ಗಳಿಸಿತು. ರುತುರಾಜ್ ಗಾಯಕ್ವಾಡ್ (50 ಎಸೆತಗಳಲ್ಲಿ 4 ಬೌಂಡರಿ ಮತ್ತು 9 ಸಿಕ್ಸರ್ ಸಹಿತ 92) ಮಾತ್ರ ವಿಧ್ವಂಸಕ ಇನ್ನಿಂಗ್ಸ್ ಆಡಿದರು.. ಧೋನಿ (ಅಜೇಯ 14) ಕೊನೆಯಲ್ಲಿ ಮಿಂಚಿದರು. ಗುಜರಾತ್ ಬೌಲರ್‌ಗಳಲ್ಲಿ ಮೊಹಮ್ಮದ್ ಶಮಿ, ರಶೀದ್ ಖಾನ್ ಮತ್ತು ಅಲ್ಜಾರಿ ಜೋಸೆಫ್ ಎರಡು ವಿಕೆಟ್ ಪಡೆದರೆ, ಜೋಶ್ ಲಿಟಲ್ ಒಂದು ವಿಕೆಟ್ ಪಡೆದರು.
ಬಳಿಕ ಗುಜರಾತ್ ಟೈಟಾನ್ಸ್ 19.2 ಓವರ್‌ಗಳಲ್ಲಿ 5 ವಿಕೆಟ್‌ಗೆ 182 ರನ್ ಗಳಿಸಿ ಗೆಲುವು ಸಾಧಿಸಿತು. ಶುಭಮನ್ ಗಿಲ್ (36 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 63) ಅರ್ಧಶತಕದೊಂದಿಗೆ ಮಿಂಚಿದರು. ರಶೀದ್ ಖಾನ್ (ಅಜೇಯ 10) ಮತ್ತು ರಾಹುಲ್ ತೆವಾಟಿಯಾ (ಅಜೇಯ 15) ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಚೆನ್ನೈ ಬೌಲರ್‌ಗಳಲ್ಲಿ ಹಂಗರ್ಗೇಕರ್ ಮೂರು ವಿಕೆಟ್ ಪಡೆದರು.. ತುಷಾರ್ ದೇಶಪಾಂಡೆ ಮತ್ತು ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.
ಓದಿ:ಐಪಿಎಲ್ 2023: ತುಷಾರ್ ದೇಶಪಾಂಡೆ ಮೊದಲ "ಇಂಪ್ಯಾಕ್ಟ್ ಪ್ಲೇಯರ್" ದಾಖಲೆ