ಮುಂಬೈ:ನಿನ್ನೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದಿರಬಹುದು. ಆದರೆ, ಪಂದ್ಯದಲ್ಲಿ ಮನಸೆಳೆದಿದ್ದು ಮಾತ್ರ 21 ವರ್ಷದ ಯುವ ಆಟಗಾರ ಯಶಸ್ವಿ ಜೈಸ್ವಾಲ್ರ ಸೊಗಸಾದ ಶತಕ. ತಂಡ ಗಳಿಸಿದ ರನ್ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜೈಸ್ವಾಲ್ ಹೆಸರಲ್ಲಿತ್ತು. ಇಂತಹ ಉತ್ಸಾಹಿ ತರುಣ ಈ ಹಿಂದೆ ಪಾನಿಪೂರಿ ಮಾರಾಟ ಮಾಡುತ್ತಿದ್ದರು ಎಂಬುದು ಯಾರಿಗೂ ಗೊತ್ತಿಲ್ಲದ ಸತ್ಯ.
ನಿಜ!. ಯಶಸ್ವಿ ಜೈಸ್ವಾಲ್ ಇಂದು ಯಶಸ್ವಿ ಕ್ರಿಕೆಟಿಗನಾಗಿ ಬೆಳೆದಿದ್ದರೆ, ಅದರ ಹಿಂದೆ ಅದೆಷ್ಟೋ ಹೋರಾಟವಿದೆ. ಉತ್ತರ ಪ್ರದೇಶದ ಮೂಲದ ಆಟಗಾರ ಮುಂಬೈಗೆ ಬಂದು ಕ್ರಿಕೆಟ್ ತರಬೇತಿ ಪಡೆಯಲು ನಡೆಸಿದ ಪರದಾಟ, ಜೀವನ ನಿರ್ವಹಣೆ ಮಾಡಿದ ಕೆಲಸಗಳು ಸ್ಫೂರ್ತಿದಾಯಕವಾಗಿದೆ.
ಜೈಸ್ವಾಲ್ರ ಆ ದಿನಗಳು...:ಕ್ರಿಕೆಟ್‌ನಲ್ಲಿ ಬೆಳೆಯಬೇಕೆಂಬ ಜೈಸ್ವಾಲ್ ಕನಸು ಅದೆಷ್ಟು ಅದಮ್ಯವಾಗಿತ್ತೆಂದರೆ, ಹುಟ್ಟೂರಾದ ಉತ್ತರ ಪ್ರದೇಶದ ಭದೋಹಿ ತೊರೆದು ಮುಂಬೈಗೆ ವಲಸೆ ಬಂದರು. ಬಳಿಕ ಆಜಾದ್ ಮೈದಾನದಲ್ಲಿ ಕ್ರಿಕೆಟ್ ಅಭ್ಯಾಸ ಶುರು ಮಾಡಿದರು. ಜೀವನಕ್ಕಾಗಿ ಕಲ್ಬಾದೇವಿ ಪ್ರದೇಶದ ಕೆಲ ಅಂಗಡಿಗಳಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲ ದಿನಗಳ ಬಳಿಕ ಅಲ್ಲಿಂದ ಹೊರಬಿದ್ದ ಜೈಸ್ವಾಲ್ ಆಜಾದ್ ಮೈದಾನದ ಹೊರಗೆ ಪಾನಿಪೂರಿ ಮಾರಾಟ ಶುರು ಮಾಡಿದ್ದರು. ಕ್ರಿಕೆಟ್ ಅಭ್ಯಾಸದ ವಿರಾಮದ ವೇಳೆ ಪಾನಿಪೂರಿ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಪ್ರತ್ಯೇಕ ನಿವಾಸವಿಲ್ಲದೇ, ಜೈಸ್ವಾಲ್ ಆಜಾದ್ ಮೈದಾನದ ಸಿಬ್ಬಂದಿಯ ಜೊತೆಗೆ ಕ್ರೀಡಾಂಗಣದಲ್ಲೇ ಟೆಂಟ್ನಲ್ಲಿ ಉಳಿದುಕೊಂಡಿದ್ದರು.
ಜ್ವಾಲಾಸಿಂಗ್ ಗರಡಿ ಸೇರಿದ ಕ್ರಿಕೆಟಿಗ:ಆಜಾದ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವಾಗ ಜೈಸ್ವಾಲ್ ಅವರ ಪ್ರತಿಭೆಯನ್ನು ಕೋಚ್ ಜ್ವಾಲಾ ಸಿಂಗ್ ಗುರುತಿಸಿದರು. ಆತನಲ್ಲಿದ್ದ ಕ್ರಿಕೆಟ್ ಹಸಿವನ್ನು ಕಂಡ ಸಿಂಗ್ ಅವರು, ಆತನಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟರು. ಶಾಲಾ ಹಂತದ ಕ್ರಿಕೆಟ್ನ ಗಿಲ್ಸ್ ಶೀಲ್ಡ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದರು. ಪಂದ್ಯದಲ್ಲಿ ಔಟಾಗದೇ 319 ರನ್ ಗಳಿಸಿದ್ದರು. ಇದು ಆತನ ಕ್ರಿಕೆಟ್ ಬದುಕನ್ನು ಬದಲಿಸಿತು.