ಹೈದರಾಬಾದ್: ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭವನ್ನೇ ಪಡೆದುಕೊಂಡಿತು. ಟೂರ್ನಿಯಲ್ಲಿ ಇದುವರೆಗೂ 7 ಪಂದ್ಯಗಳನ್ನಾಡಿದ್ದು, ಅದರಲ್ಲಿ 5ರಲ್ಲಿ ಗೆದ್ದು, 2 ಪಂದ್ಯಗಳಲ್ಲಿ ಸೋಲನುಭವಿಸಿ, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡು ಕಪ್ ಗೆಲ್ಲುವತ್ತ ಚಿತ್ತ ನೆಟ್ಟಿದೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ತಂಡ ಇದೀಗ ಸಾಮಾಜಿಕ ಕಳಕಳಿಯುಳ್ಳ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ.
ಹೌದು, ಈ ಐಪಿಎಲ್ ಟೂರ್ನಿಯ ಮುಂದಿನ ಪಂದ್ಯವೊಂದರಲ್ಲಿ ನೀಲಿ ಜೆರ್ಸಿ ತೊಟ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಯಲಿದೆ. ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ತಂಡ ಈ ತೀರ್ಮಾನಕ್ಕೆ ಬಂದಿದೆ. ಕೊರೊನಾ ವೈರಸ್ ವಿರುದ್ಧ ಹಗಲು ಇರುಳೆನ್ನದೆ ಹೋರಾಡಿತ್ತಿರುವ ಕೊರೊನಾ ವಾರಿಯರ್ಸ್ ಶ್ರಮಕ್ಕೆ ಗೌರವ ಸೂಚಿಸುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಲಿ ಜೆರ್ಸಿಯನ್ನು ತೊಟ್ಟು ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಬಳಸುವ ಮ್ಯಾಚ್ ಕಿಟ್ ಮೇಲೆ ಕೊರೊನಾ ವಾರಿಯರ್ಸ್ ಕುರಿತು ವಿಶೇಷ ಸಂದೇಶವನ್ನು ಬರೆಯಲಾಗಿರುತ್ತದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.