ನವದೆಹಲಿ:ಕಳೆದ ಮೂರು ವರ್ಷ ಐಪಿಎಲ್ ವಿಜೃಂಭಣೆಗೆ ಕೋವಿಡ್ ಕರಿನೆರಳು ಅಡ್ಡಬಂದಿತ್ತು. ಹೀಗಾಗಿ ಅಭಿಮಾನಿಗಳಿಲ್ಲದೇ ಪಂದ್ಯಗಳನ್ನು ನಡೆಸಲಾಗಿತ್ತು. ಈ ವರ್ಷ ಮತ್ತೆ ಅಭಿಮಾನಿಗಳು ತಮ್ಮ ತವರಿನಲ್ಲಿ ಐಪಿಎಲ್ ಆನಂದಿಸುತ್ತಿದ್ದಾರೆ. ಆದರೆ ಮತ್ತೆ ಕೋವಿಡ್ ಮಹಾಮಾರಿ ಕಾಡುತ್ತಿದೆ. ಹೌದು, ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಕೋವಿಡ್ಗೆ ತುತ್ತಾಗಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಚೋಪ್ರಾ, "ಕೋವಿಡ್ ಬೌಲ್ ಮಾಡಿ ಕ್ಯಾಚ್ ಹಿಡಿದಿದೆ. ಮತ್ತೆ ವೈರಸ್ ಅಪ್ಪಳಿಸಿದೆ. ಸೌಮ್ಯ ರೋಗ ಲಕ್ಷಣ ಹೊಂದಿದ್ದೇನೆ. ಎಲ್ಲವೂ ನಿಯಂತ್ರಣದಲ್ಲಿದೆ. ಕೆಲವು ದಿನಗಳ ಕಾಲ ವೀಕ್ಷಕ ವಿವರಣೆಯಿಂದ ದೂರ ಉಳಿಯುತ್ತೇನೆ. ಮತ್ತೆ ಬಲವಾಗಿ ಮರಳಿ ಬರುವ ಭರವಸೆ ಇದೆ" ಎಂದು ತಿಳಿಸಿದ್ದಾರೆ. ಮಾರ್ಚ್ 31 ರಂದು ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್‌ನ 16 ನೇ ಸೀಸನ್‌ನಲ್ಲಿ ಆಕಾಶ್ ಚೋಪ್ರಾ ಅವರು ಡಿಜಿಟಲ್ ಬ್ರಾಡ್‌ಕಾಸ್ಟರ್ ಜಿಯೋ ಸಿನಿಮಾದ ಸ್ಟಾರ್-ಸ್ಟಡ್ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಿದ್ದಾರೆ.
ಇದನ್ನೂ ಓದಿ:2011ರ ವಿಶ್ವಕಪ್ ಪಂದ್ಯದಲ್ಲಿ ಧೋನಿ ಗೆಲುವಿನ ಸಿಕ್ಸರ್: ಚೆಂಡು ಬಿದ್ದ ಸ್ಥಳದಲ್ಲಿ ಸ್ಮಾರಕ ನಿರ್ಮಾಣ
ಕಾಮೆಂಟರಿ ಮಾತ್ರವಲ್ಲದೆ, ಆಕಾಶ್ ಚೋಪ್ರ ಇತರ ಕಾರ್ಯಕ್ರಮಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದ್ದರಿಂದ, ಸಂಘಟಕರು ಮತ್ತು ಪ್ರಸಾರಕರು ಭಾಗವಹಿಸುವ ಪ್ರತಿಯೊಬ್ಬರ ಸುರಕ್ಷತೆಗಾಗಿ ವಿಶೇಷ ನಿಗಾ ಇಡಬೇಕಾಗಿದೆ. ಕಳೆದ ಕೆಲವು ಋತುಗಳಲ್ಲಿ ಐಪಿಎಲ್ ಕೋವಿಡ್ ವೈರಸ್ ಸಾಂಕ್ರಾಮಿಕದಿಂದ ಪ್ರಭಾವಿತವಾಗಿತ್ತು. ಬಯೋ ಬಬಲ್ ವ್ಯವಸ್ಥೆಯಡಿ ಕ್ರಿಕೆಟ್ ಆಡಿಸಲಾಗುತ್ತಿತ್ತು. ಆದರೂ ಸಹ ಕೆಲ ಆಟಗಾರರು ಕಳೆದ ಬಾರಿ ಸೋಂಕಿಗೆ ಒಳಗಾಗಿದ್ದರು.
ಪ್ರಸ್ತುತ ವರ್ಷ 2018ರ ಆವೃತ್ತಿಯಂತೆ ಕಿಕ್ಕಿರಿದು ತುಂಬಿದ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯುತ್ತಿದೆ. ಈ ನಡುವೆ ಭಾರತದಲ್ಲಿ ಕೋವಿಡ್ ಕೇಸ್ಗಳಲ್ಲಿ ದಿನೇ ದಿನೇ ಏರಿಕೆ ಕಂಡು ಬರುತ್ತಿದೆ. ಈ ವರ್ಷದ ಐಪಿಎಲ್ ಅನ್ನು ಎಲ್ಲಾ ತಂಡಗಳ ತವರು ಕ್ರೀಡಾಂಗಣದಲ್ಲಿಯೇ ನಡೆಸಲಾಗುತ್ತಿದೆ. ಆದರೆ, ಕೋವಿಡ್ ಭೀತಿ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸುವ ಅಗತ್ಯವಿದೆ.
ಸರ್ಕಾರ ಇತ್ತೀಚೆಗೆ ಮತ್ತೆ ಬೂಸ್ಟರ್ ಡೋಸ್ಗಳನ್ನು ವಿತರಿಸುವ ಬಗ್ಗೆ ಯೋಚಿಸಿದೆ. ದೇಶಾದ್ಯಂತ ಬಹುತೇಕರಿಗೆ ಮೂರು ಡೋಸ್ ಲಸಿಕೆಯನ್ನು ಈಗಾಗಲೇ ಸರ್ಕಾರ ಉಚಿತವಾಗಿ ನೀಡಿದೆ. ಆದರೆ ಮತ್ತೆ ಪ್ರಕರಣಗಳು ಏರಿಕೆ ಆಗುತ್ತಿವೆ. ಕೇಂದ್ರ ಆರೋಗ್ಯ ಸಚಿವಾಲಯ ಇಂದು (ಮಂಗಳವಾರ) ನೀಡಿರುವ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 3,038 ಹೊಸ ಕೋವಿಡ್ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳು 21,179 ತಲುಪಿವೆ.
ಇದನ್ನೂ ಓದಿ:ಎಂ.ಎಸ್.ಧೋನಿ ಜಾರ್ಖಂಡ್‌ನ ಗರಿಷ್ಠ ವೈಯಕ್ತಿಕ ತೆರಿಗೆ ಪಾವತಿದಾರ!