ವಿಶ್ವ ಕ್ರಿಕೆಟ್ಗೆ ಸದ್ಯದ ಬಾಸ್ ಅಂದ್ರೆ ಅದು ವಿರಾಟ್ ಕೊಹ್ಲಿ. ವಿರಾಟ್ ವೀರಾವೇಶ ತೋರಿದರೆ ಅಲ್ಲಿ ದಾಖಲೆಗಳು ಉಡೀಸ್ ಆಗೋದು ಪಕ್ಕಾ. ಅದು ಯಾವುದೇ ಮಾದರಿಯ ಕ್ರಿಕೆಟ್ ಆದರೂ ಸರಿ, ತಾನು ಹಿಂದೆ ಬೀಳಲ್ಲ ಅನ್ನೋದನ್ನು ರನ್ ಮಶಿನ್ ಮತ್ತೆ ಮತ್ತೆ ಸಾಬೀತು ಮಾಡಿದ್ದಾರೆ. ಸಾಗುತ್ತಿರುವ 16 ನೇ ಐಪಿಎಲ್ನಲ್ಲಿ ಚೇಸಿಂಗ್ ಮಾಸ್ಟರ್ ಬ್ಯಾಟಿಂಗ್ ಖದರ್ನಿಂದಾಗಿ ಕ್ರಿಸ್ಗೇಲ್ ಹೆಸರಲ್ಲಿದ್ದ ದಾಖಲೆ ಪುಡಿಯಾಗಿದೆ. ಇದು ಕಂಡ ಟಿ20 ಮಾಸ್ಟರ್ ಗೇಲ್ "ನಿವೃತ್ತಿಯಿಂದ ಮತ್ತೆ ಕ್ರಿಕೆಟ್ಗೆ ವಾಪಸ್ ಬರುವೆ" ಅಂತಾ ಹೇಳಿದ್ದಾರೆ.
ನೀವು ಓದ್ತಿರೋದು ನಿಜ. ಐಪಿಎಲ್ನಲ್ಲಿ ಕ್ರಿಸ್ ಗೇಲ್ ಹೆಸರಲ್ಲಿದ್ದ ಸರ್ವಾಧಿಕ ಶತಕಗಳ ದಾಖಲೆಯನ್ನು ವಿರಾಟ್ ಮೊನ್ನೆಯಷ್ಟೇ ಮುರಿದಿದ್ದಾರೆ. ಇದು ವೆಸ್ಟ್ ಇಂಡೀಸ್ ದೈತ್ಯ ಬ್ಯಾಟರ್ನನ್ನು ಕೆರಳಿಸಿದೆ. ಹೀಗಾಗಿ ತಾನು ಕ್ರಿಕೆಟ್ಗೆ ಹೇಳಿರುವ ಗುಡ್ಬೈನಿಂದ ಹೊರಬಂದು ಮತ್ತೆ ಕ್ರಿಕೆಟ್ ಅಖಾಡಕ್ಕೆ ಇಳಿಯುವೆ. ಮುಂದಿನ ವರ್ಷ ವಿರಾಟ್ರನ್ನು ಎದುರಿಸುವೆ ಎಂದು ತಮಾಷೆಯಾಗಿ ಹೇಳಿದ್ದಾರೆ.
ಗುಜರಾತ್ ಮತ್ತು ಆರ್ಸಿಬಿ ಪಂದ್ಯದ ವೇಳೆ ವಿರಾಟ್ ಶತಕ ಬಾರಿಸಿದ ಬಳಿಕ ಜಿಯೋ ಸಿನಿಮಾದಲ್ಲಿ ಮಾತನಾಡಿದ ಕ್ರಿಸ್ಗೇಲ್, ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. "ಆತನ ಆಟವನ್ನು ಎಂದಿಗೂ ಅನುಮಾನಿಸಬೇಡಿ. ಇದೊಂದು ಅದ್ಭುತ ಇನ್ನಿಂಗ್ಸ್, ಅಮೋಘ ಪ್ರದರ್ಶನ ನೀಡಿದರು. ನಿಮಗೆ ಗೊತ್ತಾ, ಅವರು ತಮ್ಮ ತಂಡವನ್ನು ಗೆಲುವಿನ ಯಾವಾಗಲೂ ಸ್ಥಾನದಲ್ಲಿಯೇ ಇಟ್ಟಿರುತ್ತಾರೆ" ಎಂದು ಇನ್ನಿಂಗ್ಸ್ ಬ್ರೇಕ್ ವೇಳೆ ಹೇಳಿದ್ದಾರೆ.
ಇದೇ ವೇಳೆ ತಮ್ಮ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿಯನ್ನು ಎದುರಿಸಲು ತಾವು ಮುಂದಿನ ವರ್ಷ ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿಯುವೆ. ವಿರಾಟ್ ನಿಮ್ಮನ್ನು ಅಂಗಳದಲ್ಲಿ ಭೇಟಿಯಾಗುವೆ ಎಂದು ತಮಾಷೆಯಾಗಿ ಹೇಳಿದ್ದಲ್ಲದೇ, ಫಾಫ್ ಡು ಪ್ಲೆಸಿಸ್ ಕೂಡ ಉತ್ತಮವಾಗಿ ಬ್ಯಾಟ್ ಮಾಡಿದರು ಎಂದಿದ್ದಾರೆ.