ಚೆನ್ನೈ(ತಮಿಳುನಾಡು):ಮಹೇಂದ್ರ ಸಿಂಗ್ ಧೋನಿಯ 200ನೇ ಪಂದ್ಯ. ಗೆಲ್ಲಿಸಿಕೊಡಲೇಬೇಕೆಂಬ ಹಠ ರವೀಂದ್ರ ಜಡೇಜಾರದ್ದು. 18 ಎಸೆತಗಳಲ್ಲಿ ಬೇಕಾಗಿದ್ದು 54 ರನ್. ಸ್ವತಃ ಧೋನಿಯೇ ಮೈದಾನದಲ್ಲಿದ್ದರು. ಆದರೆ, ಥ್ರಿಲ್ಲಿಂಗ್ ಪಂದ್ಯದಲ್ಲಿ ಕೊನೆಗೆ ಜಯ ಗಳಿಸಿದ್ದು ಮಾತ್ರ ರಾಜಸ್ಥಾನ ರಾಯಲ್ಸ್. ಸಂದೀಪ್ ಶರ್ಮಾರ ಯಾರ್ಕರ್ ಚೆನ್ನೈ ಗೆಲುವನ್ನು ಕಸಿದುಕೊಂಡಿತು.
ನಿನ್ನೆ ಚೆಪಾಕ್ ಮೈದಾನದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಹೋರಾಟ ರೋಚಕ ಅಂತ್ಯ ಕಂಡಿತು. ಗೆಲುವಿಗಾಗಿ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಪಂದ್ಯ ಕೊನೆಯ ಎಸೆತದವರೆಗೂ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಲೀಲಾಜಾಲವಾಗಿ ಸಿಕ್ಸರ್ಗಳನ್ನು ಬಾರಿಸುತ್ತಿದ್ದ ಧೋನಿಯನ್ನು ಸಂದೀಪ್ ಶರ್ಮಾ ಯಾರ್ಕರ್ ಮೂಲಕ ಕಟ್ಟಿಹಾಕಿ ರಾಯಲ್ಸ್ಗೆ 3 ರನ್ಗಳ ಜಯ ತಂದಿತ್ತರು.
ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ರಾಯಲ್ಸ್ ಜೋಸ್ ಬಟ್ಲರ್ರ ಅರ್ಧಶತಕದ ಬಲದಿಂದ 20 ಓವರ್ಗಳಲ್ಲಿ 175 ರನ್ ಗಳಿಸಿತು. ಗುರಿ ಬೆನ್ನತ್ತಿದ ಚೆನ್ನೈ 172 ರನ್ ಗಳಿಸಿ ಮೂರು ರನ್ಗಳಿಂದ ಸೋಲು ಕಂಡಿತು. ವಿಶೇಷ ಅಂದ್ರೆ ಈ ಪಂದ್ಯ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ 200 ನೇ ಪಂದ್ಯವಾಗಿತ್ತು.
ಮಧ್ಯಮ ಕ್ರಮಾಂಕ ಕುಸಿತ:ಚೆನ್ನೈ ತಂಡ ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು. ತಂಡದ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್ 8 ರನ್ಗೆ ಔಟಾಗಿ ನಿರಾಸೆ ಮೂಡಿಸಿದರು. ಡೆವೋನ್ ಕಾನ್ವೆ 38 ಎಸೆತಗಳಲ್ಲಿ 50 ರನ್ ಗಳಿಸಿ ವಿಕೆಟ್ ನೀಡಿದರು. ಕಳೆದ ಪಂದ್ಯದಲ್ಲಿ ಸಿಡಿದಿದ್ದ ಅಜಿಂಕ್ಯಾ ರಹಾನೆ ಈ ಪಂದ್ಯದಲ್ಲೂ ಅಬ್ಬರಿಸಿ 31 ರನ್ ಮಾಡಿದರು. ಇದಾದ ಬಳಿಕ ಶಿವಂ ದುಬೆ, ಮೊಯಿನ್ ಅಲಿ, ಅಂಬಟಿ ರಾಯುಡು ಒಂಟಿ ರನ್ಗೆ ಸುಸ್ತಾದರು. ಮಧ್ಯಮ ಕ್ರಮಾಂಕದ ಕುಸಿತದಿಂದ ತಂಡ ಒತ್ತಡಕ್ಕೆ ಸಿಲುಕಿತು.