ಚೆನ್ನೈ (ತಮಿಳುನಾಡು):ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್ ಮತ್ತುಶಿಮ್ರೋನ್ ಹೆಟ್ಮೆಯರ್ ಬ್ಯಾಟಿಂಗ್ ಬಲದಿಂದ ರಾಜಸ್ಥಾನ ರಾಯಲ್ಸ್ ನಿಗದಿತ ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಸ್ಪಿನ್ ಪಿಚ್ನಲ್ಲಿ ಚೆನ್ನೈ ಸ್ಪಿನ್ನರ್ಗಳು ಕಮಾಲ್ ಮಾಡಲಿಲ್ಲ. ಇದರಿಂದ ಸೂಪರ್ ಕಿಂಗ್ಸ್ಗೆ ರಾಜಸ್ಥಾನ 176 ರನ್ಗಳ ಸಾಧಾರಣ ಗುರಿ ನೀಡಿತು.
ಟಾಸ್ ಸೋತು ಬ್ಯಾಟಿಂಗ್ಗಿಳಿದ ರಾಜಸ್ಥಾನ ರಾಯಲ್ಸ್ಗೆ ತುಷಾರ್ ದೇಶಪಾಂಡೆ ಅವರು ಜೈಸ್ವಾಲ್ ವಿಕೆಟ್ ತೆಗೆದು ಆರಂಭಿಕ ಆಘಾತ ನೀಡಿದರು. ಮೂರನೇ ವಿಕೆಟ್ ಆಗಿ ಬಂದ ದೇವದತ್ ಪಡಿಕ್ಕಲ್ ಮತ್ತೊಬ್ಬ ಆರಂಭಿಕ ಜೋಸ್ ಬಟ್ಲರ್ ಜೊತೆ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಇಬ್ಬರೂ ಸೇರಿ ತಂಡಕ್ಕೆ 50 ಪ್ಲಸ್ ರನ್ ಜೊತೆಯಾಟ ನೀಡಿದರು.
ಪಡಿಕ್ಕಲ್ ಈ ಆವೃತ್ತಿಯ ಉತ್ತಮ ಇನ್ನಿಂಗ್ಸ್ ಆಡಿದರು. 26 ಬಾಲ್ ಎದುರಿಸಿ 38 ರನ್ ಕಲೆಹಾಕಿದರು. ಪಡಿಕ್ಕಲ್ ವಿಕೆಟ್ ಬೆನ್ನಲ್ಲೇ ಬಂದ ನಾಯಕ ಸಂಜು ಸ್ಯಾಮ್ಸನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆರ್. ಅಶ್ವಿನ್ ಅವರಿಗೆ ಬಡ್ತಿ ನೀಡಿ 5ನೇ ವಿಕೆಟ್ ಆಗಿ ಕಣಕ್ಕಿಳಿಸಿದರು. ಅಶ್ವಿನ್ 22 ಬಾಲ್ ಆಡಿ ತಂಡಕ್ಕೆ 30 ರನ್ ಸೇರಿಸಿದರು.
3000 ರನ್ ಪೂರೈಸಿದ ಬಟ್ಲರ್: ಜೋಸ್ ಬಟ್ಲರ್ ಐಪಿಎಲ್ನ 18ನೇ ಅರ್ಧಶತಕ ದಾಖಲಿಸಿದರು. ಒಂದೆಡೆ ತಂಡ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ವಿಚಲಿತರಾಗದೇ 36 ಬಾಲ್ನಲ್ಲಿ 3 ಸಿಕ್ಸ್ ಮತ್ತು ಒಂದು ಬೌಂಡರಿಯಿಂದ 52 ರನ್ ಗಳಿಸಿದರು. 86 ಐಪಿಎಲ್ ಪಂದ್ಯಗಳನ್ನು ಆಡಿರುವ ಬಟ್ಲರ್ 3000 ರನ್ ಗಡಿ ದಾಟಿದರು. ಮೂರನೇ ಅತಿ ಕಡಿಮೆ ಇನ್ನಿಂಗ್ಸ್ನಿಂದ ಈ ರನ್ ತಲುಪಿದ ಬ್ಯಾಟರ್ ಆದರು. ಗೇಲ್ 75 ಮತ್ತು ಕೆ.ಎಲ್.ರಾಹುಲ್ 80 ಪಂದ್ಯದಿಂದ ಈ ಮೈಲಿಗಲ್ಲು ಸಾಧಿಸಿದ್ದರು.