ಚೆನ್ನೈ (ತಮಿಳುನಾಡು): ಕೊನೆಯ ಎರಡು ಓವರ್ನಲ್ಲಿ ಸಿಕಂದರ್ ರಾಜಾ ಮತ್ತು ಶಾರುಖ್ ಖಾನ್ ಅವರ ಚಾಣಾಕ್ಷ್ಯ ಬ್ಯಾಟಿಂಗ್ನಿಂದಾಗಿ ಚೆನ್ನೈ ವಿರುದ್ಧ ಪಂಜಾಬ್ 4 ವಿಕೆಟ್ಗಳ ಗೆಲುವು ದಾಖಲಿಸಿತು. ಕೊನೆಯ ಎರಡು ಓವರ್ನಲ್ಲಿ ಪಂಜಾಬ್‌ಗೆ 22 ರನ್ ಬೇಕಿತ್ತು. 19ನೇ ಓವರ್ನಲ್ಲಿ ರಾಜಾ ಮತ್ತು ಶಾರುಖ್ ಜೋಡಿ ತುಷಾರ್ ದೇಶಪಾಂಡೆ ಓವರ್ನಲ್ಲಿ 13 ರನ್ ಗಳಿಸಿದರು. ಕೊನೆಯ ಓವರ್ಗೆ 9 ರನ್ ಬೇಕಿತ್ತು. ಬೌಂಡರಿ, ಸಿಕ್ಸ್ ಇಲ್ಲದೇ ಬರೀ ಓಟದಿಂದಲೇ ಈ ಇಬ್ಬರು ಬ್ಯಾಟರ್ಗಳು ವಿಜಯದ ರನ್ ಕಲೆಹಾಕಿ ಸಂಭ್ರಮಿಸಿದರು.
8 ಮಂದಿ ಬ್ಯಾಟರ್ಗಳ ಸಹಾಯದಿಂದ ಪಂಜಾಬ್ ಕಿಂಗ್ಸ್ ಚೆನ್ನೈನ ತವರು ನೆಲದಲ್ಲಿಯೇ ಗೆದ್ದು ಬೀಗಿತು. ಚೆನ್ನೈ ನೀಡಿದ್ದ 200 ರನ್ ಗುರಿ ಬೆನ್ನತ್ತಿದ ಪಂಜಾಬ್‌ಗೆ 50 ರನ್ ಆರಂಭಿಕರ ಜೊತೆಯಾಟ ಸಿಕ್ಕಿತು. ನಾಯಕ ಶಿಖರ್ ಧವನ್ ಬೇಗ ವಿಕೆಟ್ ಒಪ್ಪಿಸಿದ್ದರು. ಇಂದು 15 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 1 ಸಿಕ್ಸ್ನಿಂದ 28 ರನ್ ಕಲೆಹಾಕಿ ಔಟಾದರು.
ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಆರಂಭಿಕ ಪ್ರಭಾಸಿಮ್ರಾನ್ ಸಿಂಗ್ ಭರ್ಜರಿ ಇನ್ನಿಂಗ್ಸ್ ಕಟ್ಟಿದರು. 24 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸ್ನಿಂದ 42 ರನ್ ಕಲೆಹಾಕಿದರು. ಅಥರ್ವ ಟೈಡೆ (13) ಹೆಚ್ಚು ಹೊತ್ತು ಆಡಲಿಲ್ಲ. ಲಿಯಾಮ್ ಲಿವಿಂಗ್‌ಸ್ಟೋನ್ ವೇಗವಾಗಿ 24 ಬಾಲ್ನಲ್ಲಿ 40 ರನ್ ಗಳಿಸಿ ಔಟಾದರು. ಸ್ಯಾಮ್ ಕರನ್ (29) ಮತ್ತು ಜಿತೇಶ್ ಶರ್ಮಾ (21) ಕೊನೆಯಲ್ಲಿ ತಂಡದ ಮೊತ್ತವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು. ಆದರೆ ಅಂತಿಮವಾಗಿ ಶಾರುಖ್ ಖಾನ್ (2) ಮತ್ತು ಸಿಕಂದರ್ ರಾಜಾ (13) ಪಂದ್ಯ ಗೆಲ್ಲಿಸಿಕೊಟ್ಟರು. ಕೊನೆಯ ಬಾಲ್ಗೆ ಮೂರು ರನ್ ಓಡಿ, ಪಂದ್ಯ ಸೂಪರ್ ಓವರ್ಗೆ ಹೋಗುವುದನ್ನು ತಪ್ಪಿಸಿದರು.
ಇದಕ್ಕೂ ಮುನ್ನ, ಡೆವೊನ್ ಕಾನ್ವೆ ಅವರ ಆಕರ್ಷಕ 92 ರನ್‌ಗಳ ಇನ್ನಿಂಗ್ಸ್ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಪಂಜಾಬ್ ಕಿಂಗ್ಸ್ ತಂಡದ ಐವರು ಬೌಲರ್ಗಳು ಸರಾಸರಿ 30ಕ್ಕಿಂತ ಹೆಚ್ಚು ರನ್ ಚಚ್ಚಿಸಿಕೊಂಡರು. ಪಂಜಾಬ್ ಗೆಲುವಿಗೆ 201 ರನ್ ಬೇಕಿತ್ತು.