ಚೆನ್ನೈ: ಅಹಮದಾಬಾದ್ನ ಮೊದಲ ಪಂದ್ಯದ ಸೋಲಿನ ಬಳಿಕ ಎಂಎಸ್ಡಿ ಪಡೆಯ ಮುಂದೆ ತವರು ನೆಲದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಇಂದು ಮ್ಯಾಚ್ ನಡೆಯುತ್ತಿದೆ. ಮೊದಲ ಪಂದ್ಯದ ಸೋಲಿಗೆ 20 ರನ್ ಕಡಿಮೆ ಗಳಿಸಿದ್ದು, ಕಾರಣ ಎಂದು ಧೋನಿ ಹೇಳಿದ್ದರು. ಅದರಂತೆ ಇಂದು ಮೊದಲು ಬ್ಯಾಟ್ ಮಾಡಿದರೆ ಗೆಲುವಿನ ಹೆಚ್ಚುವರಿ 20 ರನ್ ಗಳಿಸುವ ಗುರಿ ತಂಡದ ಮುಂದಿದೆ.
ಲಖನೌದ ಪ್ರಥಮ ಪಂದ್ಯದಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿದ ಮಾರ್ಕ್ ವುಡ್ ಅವರನ್ನು ನಿಯಂತ್ರಿಸುವುದು ಚೆನ್ನೈ ಮೇಲಿರುವ ಮೊದಲ ಒತ್ತಡವಾಗಿದೆ. ಅದರಂತೆ ಚೆನ್ನೈನ ಋತುರಾಜ್ ಗಾಯಕ್ವಾಡ್ ಅವರನ್ನು ಕಟ್ಟಿಹಾಕುವುದು ಸಹ ಲಕ್ನೋಗೆ ಚಾಲೆಂಜ್ ಆಗಿದೆ. ಮಿಕ್ಕಂತೆ ಪಿಚ್ನ ಲಾಭ ಪಡೆಯಲು ಉಭಯ ತಂಡಗಳು ಸ್ಪಿನ್ನರ್ಗಳ ಮೊರೆ ಹೋಗುವ ಸಾಧ್ಯತೆಯೂ ಹೆಚ್ಚಿದೆ.
ಚೆಪಾಕ್ ಕ್ರೀಡಾಂಗಣವನ್ನು ಯಾವಾಗಲೂ ಸ್ಪಿನ್ನರ್‌ಗಳಿಗೆ ವಿಶೇಷ ಎಂದು ಪರಿಗಣಿಸಲಾಗಿದೆ. ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ದಾಖಲೆಯೂ ಉತ್ತಮವಾಗಿದೆ. ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಆಡಿದ 56 ಪಂದ್ಯಗಳಲ್ಲಿ 40 ಬಾರಿ ಗೆದ್ದಿದೆ. ತಂಡದ ಬ್ಯಾಟರ್ಗಳು ತವರಯ ನೆಲದಲ್ಲಿ ಘರ್ಜಿಸಿರುವ ದಾಖಲೆಗಳಿವೆ. ಮೊದಲ ಪಂದ್ಯದಲ್ಲಿ ತಮ್ಮ ಕೈಚಳಕ ತೋರುವಲ್ಲಿ ವಿಫಲರಾಗಿರುವ ರವೀಂದ್ರ ಜಡೇಜಾ ಮತ್ತು ಮಿಚೆಲ್ ಸ್ಯಾಂಟ್ನರ್ ಅವರಿಗೆ ಇಂದು ಪಿಚ್‌ನಲ್ಲಿ ಪರೀಕ್ಷೆಗೆ ಇರುವುದಂತೂ ಕಂಡಿತ.
ಲಕ್ನೋ ಸೂಪರ್ ಜೈಂಟ್ಸ್‌ನ ಹಲವು ಆಟಗಾರರಿಗೆ ಚೆಪಾಕ್ನಲ್ಲಿ ಆಡಿ ಅನುಭವ ಇಲ್ಲದಿದ್ದರೂ, ಮೊದಲ ಪಂದ್ಯದಲ್ಲಿ ಸೂಪರ್ ಜೈಂಟ್ಸ್ ಗೆದ್ದಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಲಕ್ನೋದಿಂದ ಚೆನ್ನೈಗೆ ಹಾರಿರುವ ರಾಹುಲ್ ಪಡೆ ಮುಂದಿನ ಗೆಲುವಿಗೆ ಸಿದ್ಧತೆ ನಡೆಸಿದೆ. ಕೆಎಲ್ ರಾಹುಲ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ಮೈದಾನದಲ್ಲಿ ಮತ್ತೊಂದು ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಈ ಪಂದ್ಯಕ್ಕೂ ಕೆಲ ಆಟ ಅಲಭ್ಯ:ಕ್ವಿಂಟನ್ ಡಿ ಕಾಕ್ ಅವರು ಭಾನುವಾರ ಸಂಜೆ ನೆದರ್ಲ್ಯಾಂಡ್ಸ್ ವಿರುದ್ಧದ ದಕ್ಷಿಣ ಆಫ್ರಿಕಾದ ಅಂತಿಮ ಏಕದಿನ ಪಂದ್ಯ ಮುಗಿಸಿ ಚೆನ್ನೈಗೆ ಹಾರಿದ್ದಾರೆ. ಆದರೆ ಅವರು ಇಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಆದರೂ ಅವರ ಸ್ಥಾನಕ್ಕೆ ಕೈಲ್ ಮೇಯರ್ಸ್ ಉತ್ತಮ ಪ್ರದರ್ಶನ ನೀಡಿರುವುದರಿಂದ ಸೂಪರ್ ಜೈಂಟ್ಸ್ ಆರಂಭಿಕರ ಕೊರತೆಯ ಒತ್ತಡ ಇಲ್ಲ.