ಚೆನ್ನೈ(ತಮಿಳುನಾಡು):ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಇಂದು ತನ್ನ ತವರಿನ ಅಂಗಳವಾದ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸೆಣಸಲಿದೆ. ಚೆನ್ನೈ ಸೂಪರ್ ಕಿಂಗ್ಸ್ 11 ಪಂದ್ಯಗಳನ್ನು ಆಡಿದ್ದು, 6 ರಲ್ಲಿ ಗೆದ್ದು 1 ರದ್ದಾದ ಕಾರಣ ಪಾಯಿಂಟ್ ಪಟ್ಟಿಯಲ್ಲಿ 13 ಅಂಕದಿಂದ ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಲೀಗ್ನಲ್ಲಿ ಇದುವರೆಗೆ 10 ಪಂದ್ಯಗಳನ್ನು ಆಡಿದ್ದು, 4ರಲ್ಲಿ ಗೆದ್ದು 8 ಅಂಕದಿಂದ 10ನೇ ಸ್ಥಾನದಲ್ಲಿದೆ.
ಡೆಲ್ಲಿ ಆರಂಭದಿಂದ ಸತತ ಆರು ಪಂದ್ಯಗಳನ್ನು ಹೀನಾಯವಾಗಿ ಸೋತಿತ್ತು, ಕಳೆದೆರಡು ಪಂದ್ಯದಲ್ಲಿ ಉತ್ತಮ ಲಯಕ್ಕೆ ಮರಳಿದ್ದು, ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಮಣಿಸಿ ಪ್ಲೇ ಆಫ್ ಸ್ಪರ್ಧೆಯಲ್ಲಿ ಉಳಿದಿದೆ. ಇನ್ನು ಚೆನ್ನೈ ಉದ್ಘಾಟನಾ ಪಂದ್ಯದ ಸೋಲಿನ ನಂತರ ಲೀಗ್ನಲ್ಲಿ ಏರಿಳಿತ ಕಂಡರೂ ಪ್ಲೇ ಆಫ್ ಪ್ರವೇಶಕ್ಕೆ ಹತ್ತಿರದಲ್ಲಿದೆ. ಇನ್ನು ಎರಡು ಗೆಲುವು ಕಂಡಲ್ಲಿ ಧೋನಿ ಪಾಳಯ ನಾಲ್ಕರ ಸ್ಥಾನದಲ್ಲಿ ಭದ್ರವಾಗಿರಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಇನ್ನು ಮುಂದಿನ ಪಂದ್ಯಗಳಲ್ಲಿ ಎರಡು ಬಾರಿ ಪಂಜಾಬ್ ಹಾಗೂ ಚೆನ್ನೈಯನ್ನು ಎದುರಿಸಲಿದೆ. ಇಂದು ಸೂಪರ್ ಕಿಂಗ್ಸ್ ಜೊತೆಗೆ ಆಡಿದ ನಂತರ ಡೆಲ್ಲಿ ಇದೇ 20 ರಂದು ಮತ್ತೆ ಧೋನಿ ಪಾಳಯವನ್ನೇ ಎದುರಿಸಲಿದೆ. ಅದರ ಜೊತೆಗೆ ಮೇ 13 ಕ್ಕೆ ಮತ್ತು 17 ಕ್ಕೆ ಪಂಜಾಬ್ ಜೊತೆ ಮುಖಾಮುಖಿ ಆಗಬೇಕಿದೆ. ಡೆಲ್ಲಿಗೆ ಈ ನಾಲ್ಕು ಪಂದ್ಯಗಳ ಗೆಲುವು ಪ್ರಮುಖವಾಗಿದೆ.
ಚೆನ್ನೈ ಕಳೆದ ಪಂದ್ಯವನ್ನು ಮುಂಬೈ ವಿರುದ್ಧ ಆಡುವಾಗಲೇ ಬೆನ್ ಸ್ಟೋಕ್ಸ್ ತಂಡವನ್ನು ಸೇರಲಿದ್ದಾರೆ ಎನ್ನಲಾಗಿತ್ತು, ಆದರೆ ಆಡಿರಲಿಲ್ಲ. ಈ ಪಂದ್ಯಕ್ಕೂ ಮುನ್ನ ಹಸ್ಸಿ ಬೆನ್ ಸ್ಟೋಕ್ಸ್ ಫಿಟ್ ಆಗಿದ್ದಾರೆ ಎಂದಿರುವುದು ಅವರು ಕಣಕ್ಕಿಳಿಯುವ ಮುನ್ನೂಚನೆಯಾಗಿದೆ. ಕೊನೆಯ ಮೂರು ಪಂದ್ಯಗಳು ಚೆನ್ನೈನ ಮುಂದಿದ್ದು ಈ ಸಂದರ್ಭಕ್ಕೂ ಕೀ ಪ್ಲೇಯರ್ ತಂಡದಲ್ಲಿ ಆಡದೇ ಹೋದಲ್ಲಿ ಕೋಟಿ ಕೊಟ್ಟು ಖರೀದಿಸಿದ್ದು ವ್ಯರ್ಥವಾದಂತಾಗಲಿದೆ.