ಚೆನ್ನೈ (ತಮಿಳುನಾಡು):ಚೆನ್ನೈ ಸೂಪರ್ ಕಿಂಗ್ಸ್ ತಂಡದ 200ನೇ ಪಂದ್ಯ ಮುನ್ನಡೆಸುತ್ತಿರುವ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಐಸಿಸಿ ಮಾಜಿ ಅಧ್ಯಕ್ಷ ಮತ್ತು ಮಾಜಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ಸ್ಮರಣಿಕೆ ನೀಡಿದರು. ಚೆಪಾಕ್ ಕ್ರೀಡಾಂಗಣದಲ್ಲಿಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ಎದುರಿಸುತ್ತಿದ್ದು, ಇದರ ನಾಯಕತ್ವದ ಮೂಲಕ ಧೋನಿ ಒಂದೇ ಫ್ರಾಂಚೈಸಿಯ 200 ಪಂದ್ಯಗಳ ಮುಂದಾಳತ್ವ ವಹಿಸಿದ ದಾಖಲೆ ಬರೆದರು.
ಧೋನಿಗೆ ಸ್ಮರಣಿಕೆ ನೀಡುವ ವೇಳೆ ಎನ್. ಶ್ರೀನಿವಾಸನ್ ಅವರ ಪತ್ನಿ ಚಿತ್ರಾ ಶ್ರೀನಿವಾಸನ್ ಮತ್ತು ಪುತ್ರಿ ರೂಪಾ ಗುರುನಾಥ್ ಉಪಸ್ಥಿತರಿದ್ದರು. ಪಂದ್ಯದ ಟಾಸ್ಗೂ ಮುನ್ನ ಧೋನಿಯನ್ನು ಗೌರವಿಸಲಾಯಿತು. 15 ಆವೃತ್ತಿಯ ನೆನಪಿಗಾಗಿ ತಲಾ 200 ಎಂದು ಬರೆದಿರುವ ಸ್ಮರಣಿಕೆ ಕೊಡಲಾಯಿತು.
ಭಾರತದ ಮಾಜಿ ನಾಯಕ ಧೋನಿ 200 ಪಂದ್ಯಗಳಲ್ಲಿ ಒಂದೇ ತಂಡವನ್ನು ಮುನ್ನಡೆಸಿದ ಮೊದಲ ಕ್ರಿಕೆಟಿಗ. ಈ ಆವೃತ್ತಿಯಲ್ಲಿ ಇಂದಿನ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ಮುಂದಾಳತ್ವದಿಂದ ವಿನೂತನ ದಾಖಲೆ ಬರೆದಿದ್ದಾರೆ. ಮಿಲಿಯನ್ ಡಾಲರ್ ಕ್ರಿಕೆಟ್ ಲೀಗ್ನ ಯಶಸ್ವಿ ನಾಯಕ ಧೋನಿ. ಚೆನ್ನೈ ಸೂಪರ್ ಕಿಂಗ್ಸ್ ಇವರ ಮುಂದಾಳತ್ವದಲ್ಲಿ 4 ಬಾರಿ ಪ್ರಶಸ್ತಿ ಗೆದ್ದರೆ, 5 ಬಾರಿ ರನ್ನರ್ ಅಪ್ ಆಗಿದೆ. 13 ಆವೃತ್ತಿಯಲ್ಲಿ 11 ಬಾರಿ (ಎರಡು ಆವೃತ್ತಿ ತಂಡ ಬ್ಯಾನ್ ಆಗಿತ್ತು) ಚೆನ್ನೈ ಅಂಕ ಪಟ್ಟಿಯ ಅಗ್ರ ನಾಲ್ಕರಲ್ಲಿತ್ತು.