ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ಗೆ ಸೋಮವಾರ ಹೊಸದಾಗಿ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳ ಸೇರ್ಪಡೆಯಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಐಪಿಎಲ್ನಲ್ಲಿ 'ಬೆಟ್ಟಿಂಗ್ ಕಂಪನಿಗಳೂ ಕೂಡ ತಂಡಗಳನ್ನು ಖರೀದಿಸಬಹುದು' ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಆರ್ಪಿಎಸ್ಜಿ (RPSG) ವೆಂಚರ್ಸ್ ಲಿಮಿಟೆಡ್ ಮತ್ತು ಇರೆಲಿಯಾ ಕಂಪನಿ ಪ್ರೈವೇಟ್ ಲಿಮಿಟೆಡ್ (CVC Capital Partners) ಗಳು ನೂತನ ಫ್ರಾಂಚೈಸಿಗಳಾಗಿದ್ದು, 2022ರಿಂದ ಹೊಸ IPL ತಂಡಗಳ ಮಾಲೀಕರಾಗಲಿದ್ದಾರೆ. RPSG ಗ್ರೂಪ್ 7,090 ಕೋಟಿ ರೂ.ಗೆ ಲಕ್ನೋ ತಂಡ ಹಾಗೂ CVC ಕ್ಯಾಪಿಟಲ್ ಕಂಪನಿಯು 5,600 ಕೋಟಿ ರೂ.ಗೆ ಅಹಮದಾಬಾದ್ ತಂಡದ ಒಡೆತನವನ್ನು ಪಡೆದಿವೆ.
ಈ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿಯಿಂದ ಘೋಷಣೆ ಹೊರಬಿದ್ದ ಬೆನ್ನಲ್ಲೇ ಲಲಿತ್ ಮೋದಿ ಬಿಸಿಸಿಐ ವಿರುದ್ಧ ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ. 'ಬೆಟ್ಟಿಂಗ್ ಕಂಪನಿಗಳೂ ಕೂಡ ಐಪಿಎಲ್ ತಂಡವನ್ನು ಖರೀದಿಸಬಹುದು ಎಂದು ನನಗನ್ನಿಸುತ್ತಿದೆ. ಇದೊಂದು ಹೊಸ ನಿಯಮವಿರಬಹುದು. ಹೊಸ ಬಿಡ್ದಾರರಲ್ಲಿ ಒಬ್ಬರು ಬೆಟ್ಟಿಂಗ್ ಕಂಪನಿಯ ಒಡೆಯರಾಗಿದ್ದಾರೆ. ಮುಂದೇನು? ಇಂತಹ ಸಂದರ್ಭದಲ್ಲಿ ಭ್ರಷ್ಟಾಚಾರ ವಿರೋಧಿ ದಳವು ಏನು ಮಾಡಲಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಲಿಲಿತ್ ಮೋದಿ ಟ್ವೀಟ್ ಬಳಿಕ, CVC ಕ್ಯಾಪಿಟಲ್ ಕಂಪನಿಯು ಅನೇಕ ಬೆಟ್ಟಿಂಗ್ ಕಂಪನಿಗಳ ಜೊತೆ ಲಿಂಕ್ ಹೊಂದಿದೆ. ಅಲ್ಲದೆ ಇತರ ಬೆಟ್ಟಿಂಗ್ ಹಾಗೂ ಜೂಜು ಕಂಪನಿಗಳಲ್ಲೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಮಕ್ಕಳನ್ನು ಕಟ್ಟಿಹಾಕಿದ ತಾಯಿ, ತಲೆ ಕೆಳಗಾಗಿ ನೇತು ಹಾಕಿದ ವ್ಯಕ್ತಿ: ಪೊಲೀಸರಿಂದ ತನಿಖೆ