ನವದೆಹಲಿ: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕಳೆದ ನಾಲ್ಕು ತಿಂಗಳಿನಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ರಿಷಭ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಮೊದಲ ಪಂದ್ಯದಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇಂದು ಬೂಸ್ಟರ್ ಡೋಸ್ ಸಿಗಲಿದೆ. ಇಂದಿನ ಪಂದ್ಯದಲ್ಲಿ ರಿಷಭ್ ಪಂತ್ ಕೂಡ ಇರಲಿದ್ದಾರೆ ಎನ್ನಲಾಗ್ತಿದೆ. ದೆಹಲಿಯ ಅರುಣ್ ಜೇಟ್ಲಿಯಲ್ಲಿ ನಡೆಯಲಿರುವ ಈ ಪಂದ್ಯದ ವೇಳೆ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ಉಪಸ್ಥಿತರಿರುತ್ತಾರೆ ಮತ್ತು ಅವರ ತಂಡವನ್ನು ಪ್ರೋತ್ಸಾಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದೀಗ ಅವರ ಎರಡನೇ ಪಂದ್ಯ ಗುಜರಾತ್ ಟೈಟಾನ್ಸ್ ವಿರುದ್ಧ ಅವರ ಮನೆಯಂಗಳದಲ್ಲಿ ಆಡಲಿದೆ. ಐಪಿಎಲ್ 2023 ರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಗುಜರಾತ್ ಸೋಲಿಸಿದೆ. ಅದೇ ಉತ್ಸಾಹದಲ್ಲಿ ಇಂದು ಕಣಕ್ಕಿಳಿಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂದಿರುವ ಸವಾಲು ದೊಡ್ಡದಿದ್ದರೂ ರಿಷಭ್ ಪಂತ್ ಪ್ರವೇಶ ಅವರ ಮನೋಬಲವನ್ನು ಹೆಚ್ಚಿಸಿದೆ.
ಟೀ ಶರ್ಟ್ ನೇತು ಹಾಕಿ ಪಂತ್ರನ್ನು ನೆನಪಿಸಿಕೊಂಡ ಡೆಲ್ಲಿ: ಲಕ್ನೋ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂತ್ ಅವರ ಟೀ ಶರ್ಟ್ ಅನ್ನು ಡಗ್‌ಔಟ್‌ನಲ್ಲಿ ನೇತುಹಾಕುವ ಮೂಲಕ ತಮ್ಮ ಸ್ಫೋಟಕ ನಾಯಕನನ್ನು ನೆನಪಿಸಿಕೊಂಡಿತ್ತು. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಿಷಭ್ ಪಂತ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ನಿಧಾನವಾಗಿ ನಡೆಯಲು ಆರಂಭಿಸಿದ್ದು, ಇನ್ನು ಕೆಲವೇ ತಿಂಗಳಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸುವ ನಿರೀಕ್ಷೆ ಇದೆ. ಈ ನಾಲ್ಕು ತಿಂಗಳಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.