ಸಿಡ್ನಿ:ಮಾಲ್ಡೀವ್ಸ್‌ನಿಂದ ಇಲ್ಲಿಗೆ ಆಗಮಿಸಿರುವ ಆಸ್ಟ್ರೇಲಿಯಾದ ಐಪಿಎಲ್ ಆಟಗಾರರ 14 ದಿನಗಳ ಕ್ವಾರಂಟೈನ್ ವೆಚ್ಚವನ್ನು ಬಿಸಿಸಿಐ ಭರಿಸುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಹಂಗಾಮಿ ಸಿಇಒ ನಿಕ್ ಹಾಕ್ಲೆ ಮಂಗಳವಾರ ಹೇಳಿದ್ದಾರೆ.
ಮುಂಚೂಣಿಯ ಆಟಗಾರರಾದ ಪ್ಯಾಟ್ ಕಮ್ಮಿನ್ಸ್ ಮತ್ತು ಸ್ಟೀವ್ ಸ್ಮಿತ್, ಅಧಿಕಾರಿಗಳು ಮತ್ತು ವೀಕ್ಷಕ ವಿವರಣೆಗಾರರು ಸೇರಿದಂತೆ ಆಸ್ಟ್ರೇಲಿಯಾದ 38 ಸದಸ್ಯರಲ್ಲಿ ಹೆಚ್ಚಿನವರು ಸೋಮವಾರ ಮಾಲ್ಡೀವ್ಸ್‌ನಿಂದ ಸಿಡ್ನಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕೋವಿಡ್-19 ಸಾಂಕ್ರಾಮಿಕದ ಕಾರಣ ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ಮೇ 15 ರವರೆಗೆ ಆಸ್ಟ್ರೇಲಿಯಾ ಸರ್ಕಾರ ನಿರ್ಬಂಧ ವಿಧಿಸಿದ್ದರಿಂದ ಆಟಗಾರರು ಅನಿವಾರ್ಯವಾಗಿ ಮಾಲ್ಡೀವ್ಸ್‌ನಲ್ಲಿ 10 ದಿನಗಳನ್ನು ಕಳೆಯಬೇಕಾಯಿತು.
"ನಮ್ಮ ಆಟಗಾರರು ತಮ್ಮ ಮನೆಗಳಿಗೆ ಸುರಕ್ಷಿತವಾಗಿ ಹಾಗೂ ಶೀಘ್ರವಾಗಿ ತಲುಪಲು ಬಿಸಿಸಿಐ ಎಲ್ಲ ರೀತಿಯ ಸಹಕಾರ ನೀಡಿದೆ. ನಾವೂ ಸಹ ಅವರೊಂದಿಗೆ ಸಹಕರಿಸಿದ್ದು, ಬಿಸಿಸಿಐ ಕಾರ್ಯ ಶ್ಲಾಘನೀಯವಾಗಿದೆ. ಬಿಸಿಸಿಐ ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿದೆ." ಎಂದು ಹಾಕ್ಲೆ ತಿಳಿಸಿದ್ದಾರೆ.
ನಾಲ್ಕು ಬೇರೆ ಬೇರೆ ತಂಡಗಳ ನಾಲ್ವರು ಆಟಗಾರರು ಹಾಗೂ ಇಬ್ಬರು ತರಬೇತುದಾರರು ಕೋವಿಡ್ ಪಾಸಿಟಿವ್ ಆದ ನಂತರ ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್ ಟೂರ್ನಿಯನ್ನು ಹಠಾತ್ತಾಗಿ ಮುಂದೂಡಲಾಗಿತ್ತು. ಆದರೆ, ಈ ಮಧ್ಯೆ ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದರಿಂದ ಭಾರತದಿಂದ ಒಳಬರುವ ಎಲ್ಲ ಪ್ರಯಾಣಿಕರಿಗೆ ಆಸ್ಟ್ರೇಲಿಯಾ ನಿಷೇಧ ಹೇರಿತ್ತು. ಇದರಿಂದಾಗಿ ಆಸ್ಟ್ರೇಲಿಯಾ ಆಟಗಾರರು ಕೂಡಲೇ ತಮ್ಮ ದೇಶಕ್ಕೆ ಮರಳಲಾಗದೇ ಒದ್ದಾಡುವಂತಾಗಿತ್ತು. ಈಗ ಕೊನೆಗೂ ಆಟಗಾರರು ಸ್ವದೇಶ ತಲುಪಿದ್ದು, ಬಿಸಿಸಿಐ ಕಾರ್ಯಕ್ಕೆ ಆಸ್ಟ್ರೇಲಿಯಾ ಆಟಗಾರರು ಧನ್ಯವಾದ ತಿಳಿಸಿದ್ದಾರೆ.