ಅಹಮದಾಬಾದ್ (ಗುಜರಾತ್): ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹಿರಿಯ ಬ್ಯಾಟರ್ ಅಂಬಟಿ ರಾಯಡು ಅವರು ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಫೈನಲ್ ತನ್ನ ಲೀಗ್ ವೃತ್ತಿ ಜೀವನದ ಕೊನೆಯ ಪಂದ್ಯವಾಗಿದೆ ಎಂದು ಘೋಷಿಸಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಸೆಣಸಲಿದ್ದು, ಇದು ಜಿಟಿಯ ಸತತ ಎರಡನೇ ಫೈನಲ್ ಮತ್ತು ಸಿಎಸ್‌ಕೆಯ 10ನೇ ಫೈನಲ್ ಪಂದ್ಯವಾಗಿದೆ.
ನಿವೃತ್ತಿಯ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡ ರಾಯಡು:ಈ ಕುರಿತು ರಾಯಡು ಟ್ವಿಟ್ ಮಾಡಿದ್ದಾರೆ. "2 ಶ್ರೇಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಆಡಿದ್ದೇನೆ. ಐಪಿಎಲ್ನಲ್ಲಿ ಒಟ್ಟಾರೆ 14 ಸೀಸನ್‌ಗಳಲ್ಲಿ 204 ಪಂದ್ಯಗಳನ್ನು ಆಡಿದ್ದು, 11 ಪ್ಲೇಆಫ್‌ಗಳು, 8 ಫೈನಲ್‌ಗಳು, 5 ಟ್ರೋಫಿ ಗೆದ್ದಾಗ ತಂಡಗಳಲ್ಲಿ ನಾನೂ ಇದ್ದೆ. ಇಂದು 6ನೇ ಕಪ್ ಗೆಲ್ಲುವ ನಿರೀಕ್ಷೆಯ ರಾತ್ರಿ. ಸಾಕಷ್ಟು ಪ್ರಯಾಣವಾಗಿದೆ, ಇಂದು ರಾತ್ರಿಯ ಐಪಿಎಲ್ ಫೈನಲ್ ನನ್ನ ಕೊನೆಯ ಪಂದ್ಯವಾಗಿದೆ ಎಂದು ನಾನು ನಿರ್ಧರಿಸಿದ್ದೇನೆ. ಈ ಶ್ರೇಷ್ಠ ಪಂದ್ಯಾವಳಿಯನ್ನು ಆಡುವುದನ್ನು ನಾನು ನಿಜವಾಗಿಯೂ ಆನಂದಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ಮತ್ತೆ ಮರಳುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.
ಅಂಬಟಿ ರಾಯಡು ಐಪಿಎಲ್ ವೃತ್ತಿಜೀವನದ 203 ಪಂದ್ಯಗಳಲ್ಲಿ 28.29ರ ಸರಾಸರಿಯಲ್ಲಿ ಮತ್ತು 127.29 ರ ಸ್ಟ್ರೈಕ್ ರೇಟ್‌ನಲ್ಲಿ 4,329 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 22 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅತ್ಯುತ್ತಮ ಸ್ಕೋರ್ ಅಜೇಯ ಶತಕವಾಗಿದೆ. ಅವರು ಐಪಿಎಲ್ ಇತಿಹಾಸದಲ್ಲಿ ಸಾರ್ವಕಾಲಿಕ 12 ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
2010-2017 ರವರೆಗೆ 114 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಅವರು ಪ್ರತಿನಿಧಿಸಿದ್ದರು. ಎಂಐ ಫ್ರಾಂಚೈಸಿಗೆ 126.16 ಸ್ಟ್ರೈಕ್ ರೇಟ್‌ನಲ್ಲಿ 27.15ರ ಸರಾಸರಿಯಲ್ಲಿ 14 ಅರ್ಧ ಶತಕಗಳೊಂದಿಗೆ 2,416 ರನ್ ಗಳಿಸಿದ್ದರು. ಉತ್ತಮ ಸ್ಕೋರ್ ನಾಟೌಟ್ 81 ಆಗಿತ್ತು. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಯಡು ಸೇರಿಕೊಂಡರು. ಸಿಎಸ್‌ಕೆ ಪರ 89 ಪಂದ್ಯಗಳಲ್ಲಿ 29.89ರ ಸರಾಸರಿಯಲ್ಲಿ 128.73 ಸ್ಟ್ರೈಕ್ ರೇಟ್ನಿಂದ 1,913 ರನ್ ಗಳಿಸಿದ್ದಾರೆ. ಅವರು ಸಿಎಸ್ಕೆಯಲ್ಲಿ 1 ಶತಕ ಮತ್ತು ಎಂಟು ಅರ್ಧಶತಕಗಳನ್ನು ಗಳಿಸಿದ್ದು, ಅವರ ಅತ್ಯುತ್ತಮ ಸ್ಕೋರ್ ಅಜೇಯ 100 ಆಗಿದೆ.
ಸಿಎಸ್‌ಕೆ ಪರ 2018ರಲ್ಲಿ ರಾಯಡು ಉತ್ತಮ ಇನ್ನಿಂಗ್ಸ್ ಆಡಿದರು. 16 ಪಂದ್ಯಗಳಲ್ಲಿ 43.00 ಸರಾಸರಿಯಲ್ಲಿ 602 ರನ್ ಗಳಿಸಿದ್ದರು. ಆ ಋತುವಿನಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದರು. ಮುಂಬೈ ಇಂಡಿಯನ್ಸ್ (2013, 2015 ಮತ್ತು 2017) ಮತ್ತು ಚೆನ್ನೈನಲ್ಲಿ (2018 ಮತ್ತು 2021) ಜೊತೆಗೆ ಒಟ್ಟು ಐದು ಬಾರಿ ಟ್ರೋಫಿ ವಿಜಯದ ಸಮಯದಲ್ಲಿದ್ದರು. 16ನೇ ಆವೃತ್ತಿಯಲ್ಲಿ 15.44 ರ ಸರಾಸರಿಯಲ್ಲಿ ಮತ್ತು 132.38ರ ಸ್ಟ್ರೈಕ್ ರೇಟ್‌ನಲ್ಲಿ 139 ರನ್ ಗಳಿಸಿದ್ದಾರೆ. 27 ಅವರ ಉತ್ತಮ ಸ್ಕೋರ್ ಆಗಿದೆ.
ಇದನ್ನೂ ಓದಿ:IPL 2023 Final: ಚೆನ್ನೈ vs ಗುಜರಾತ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ, ಟಾಸ್ ವಿಳಂಬ