ಅಲಿಗಢ (ಉತ್ತರ ಪ್ರದೇಶ):ರಿಂಕು ಸಿಂಗ್. ಸದ್ಯದ ಐಪಿಎಲ್ನಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ಹೆಸರು. ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ಆಟಗಾರ ತಾವೊಬ್ಬ "ಸೂಪರ್ ಫಿನಿಷರ್" ಎಂಬುದನ್ನು ಸಾಬೀತು ಮಾಡುತ್ತಲೇ ಇದ್ದಾರೆ. ನಿನ್ನೆ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ ಝಳಪಿಸಿ ಮತ್ತೆ ಅಭಿಮಾನಿಗಳ ಹೃದಯ ಗೆದ್ದರು.
ಕೊನೆಯ ಓವರ್ ಮ್ಯಾಜಿಕ್:ಈಡನ್ ಗಾಡರ್ನ್ನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ಸೋಲಿನ ಸುಳಿಯಲ್ಲಿತ್ತು. ಕೊನೆಯ ಓವರ್ನಲ್ಲಿ ಗೆಲ್ಲಲು 8 ರನ್ ಬೇಕಿತ್ತು. ಪಂಜಾಬ್ ಯುವ ವೇಗಿ ಅರ್ಷದೀಪ್ ಸಿಂಗ್ ಬೌಲ್ ಮಾಡುತ್ತಿದ್ದರು. ಕರಾರುವಾಕ್ಕಾಗಿ ಬೌಲ್ ಮಾಡಿದ ಸಿಂಗ್ ಮೊದಲ ಐದು ಎಸೆತಗಳಲ್ಲಿ 4 ರನ್ ನೀಡಿ ಮಾತ್ರ ನೀಡಿದ್ದರು. ಐದನೇ ಎಸೆತವನ್ನು ಬಲವಾಗಿ ಹೊಡೆಯಲು ಯತ್ನಿಸಿದ ಆ್ಯಂಡ್ರೆ ರಸೆಲ್ ವಂಚಿಸಿ ಚೆಂಡು ಕೀಪರ್ ಕೈಸೇರಿತ್ತು. ಒಂಟಿ ರನ್ಗಾಗಿ ಓಡುವಾಗ ರಸೆಲ್ ರನೌಟ್ ಆದರು.
ಇದು ಪಂದ್ಯದ ಗತಿಯನ್ನೇ ಬದಲಿಸಿ, ಕೋಲ್ಕತ್ತಾ ಇನ್ನಷ್ಟು ಒತ್ತಡಕ್ಕೆ ಸಿಲುಕಿತು. ತುದಿಗಾಲ ಮೇಲೆ ನಿಲ್ಲಿಸಿದ್ದ ಪಂದ್ಯದಲ್ಲಿ ರಿಂಕು ಮ್ಯಾಜಿಕ್ ಮಾಡಿದರು. ಕೊನೆಯ ಎಸೆತದಲ್ಲಿ ಗೆಲ್ಲಲು 4 ರನ್ ಅಗತ್ಯವಿತ್ತು. ಹಿಂಬದಿ ತೂರಿ ಬಂದ ಚೆಂಡನ್ನು ರಿಂಕು ಸಿಂಗ್ ಬೌಂಡರಿ ಬಾರಿಸಿದರು. ಕೆಕೆಆರ್ ಗೆಲುವು ಸಾಧಿಸಿತು.
ಎರಡನೇ ಸಲ ಸೂಪರ್ ಫಿನಿಷ್:ರಿಂಕು ಈ ಐಪಿಎಲ್ನಲ್ಲಿ ಎರಡನೇ ಬಾರಿಗೆ ಕೆಕೆಆರ್ ತಂಡಕ್ಕೆ ಆಪತ್ಬಾಂಧವರಾದರು. ಇದಕ್ಕೂ ಮೊದಲು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರೋಷಾವೇಷದಿಂದ ಬ್ಯಾಟ್ ಬೀಸಿ ಸೋತೇ ಹೋಗಿದ್ದ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದರು. ಕೊನೆಯ ಓವರ್ನಲ್ಲಿ ಗೆಲ್ಲಲು ತಂಡಕ್ಕೆ 29 ರನ್ ಅಗತ್ಯವಿತ್ತು. ಕ್ರೀಸ್ನಲ್ಲಿದ್ದ ದಾಂಡಿಗ ರಿಂಕು, ಬೌಲರ್ ಯಶ್ ದಯಾಳ್ರನ್ನು ದಂಡಿಸಿ 5 ಎಸೆತಗಳನ್ನೂ ಸಿಕ್ಸರ್ ಬಾರಿಸಿ 30 ರನ್ ಸಿಡಿಸಿ ಗೆಲುವು ತಂದುಕೊಟ್ಟು ರಾತ್ರೋರಾತ್ರಿ ಹೀರೋ ಆಗಿದ್ದರು.