ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವೇಗಿ ಆಕಾಶ್ ಮಧ್ವಲ್ 5 ರನ್ಗಳಿಗೆ 5 ವಿಕೆಟ್ ಪಡೆಯುವ ಮೂಲಕ ದಾಖಲೆಗಳನ್ನು ಬರೆದಿದ್ದಾರೆ. ಬುಧವಾರ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ಅನ್ನು 81 ರನ್ಗಳಿಂದ ಮಣಿಸುವ ಮೂಲಕ ಎರಡನೇ ಹಂತದ ಕ್ವಾಲಿಪೈರ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ.
ಮುಂಬೈ ನೀಡಿದ್ದ 183 ರನ್ಗಳ ಗುರಿಯನ್ನು ಬೆನ್ನಟ್ಟಿದ ಕೃನಾಲ್ ಪಡೆ, ಮುಂಬೈ ಬೌಲರ್ಗಳ ದಾಳಿಗೆ ಸಿಲುಕಿ ಕೇವಲ 101 ರನ್ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಎಲಿಮಿನೇಟರ್ ಪಂದ್ಯದಲ್ಲಿ 81ರನ್ಗಳ ದೊಡ್ಡ ಅಂತರದ ಗೆಲುವು ಸಾಧಿಸಿದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಮುಂಬೈ ಪಾತ್ರವಾಗಿದೆ.
ಮಾಡು ಇಲ್ಲ ಮಡಿ ಎನ್ನುವ ಪಂದ್ಯದಲ್ಲಿ ಮುಂಬೈನ ವೇಗಿ ಆಕಾಶ್ ಮಧ್ವಲ್ ಆಕ್ರಮಣಕಾರಿ ಬೌಲಿಂಗ್ ನಡೆಸಿ ಲಕ್ನೋದ ಪ್ರಮುಖ 5 ವಿಕೆಟ್ಗಳನ್ನು ಪಡೆಯುವ ಮೂಲಕ ಭಾರತದ ದಂತಕಥೆ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ದಾಖಲೆ ಸರಿಗಟ್ಟಿದ್ದಾರೆ. ಅಲ್ಲದೇ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ 5ರನ್ಗಳಿಗೆ 5ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. ಐಪಿಎಲ್ 2009ರ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕುಂಬ್ಳೆ ಈ ಸಾಧನೆ ಮಾಡಿದ್ದರು.
ಆಕಾಶ್ ಮಧ್ವಲ್ ಸತತ ಎರಡು ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದರು. ಇನ್ನು ಸತತ ಎರಡು ಪಂದ್ಯಗಳಲ್ಲಿ ಇದುವರೆಗೂ 8 ವಿಕೆಟ್ ಪಡೆದಿರುವುದು ದಾಖಲೆ ಇತ್ತು ಅಲ್ಲದೇ ಈ ಪಟ್ಟಿಯಲ್ಲಿ ಹತ್ತು ಬೌಲರ್ಗಳಿದ್ದಾರೆ. ಆದರೇ ಆಕಾಶ್ ಅವರಿಗಿಂತ 1 ವಿಕೆಟ್ ಹೆಚ್ಚು ಪಡೆದು ಮುಂದೆ ಸಾಗಿದ್ದಾರೆ.
ಆಕಾಶ್ ಸತತ 2 ಪಂದ್ಯಗಳಲ್ಲಿ 4 ಮತ್ತು ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಆರನೇ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕಿಂತ ಮೊದಲು 2009 ರಲ್ಲಿ ಶಾದಾಬ್, 2012 ರಲ್ಲಿ ಮುನಾಫ್ ಪಟೇಲ್, 2018 ರಲ್ಲಿ ಆಂಡ್ರ್ಯೂ ಟೈ, 2022 ರಲ್ಲಿ ಕಗಿಸೊ ರಬಾಡ ಮತ್ತು 2023ರಲ್ಲಿ ಯುಜ್ವೇಂದ್ರ ಚಹಾಲ್ ಈ ಸಾಧನೆ ಮಾಡಿದ್ದರು. ಇನ್ನು ಚೆನ್ನೈನ ಚೆಪಾಕ್ ಮೈದಾನದಲ್ಲಿ, ಐಪಿಎಲ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ದಾಖಲೆಯನ್ನು ಆಕಾಶ್ ತಮ್ಮ ಹೆಸರಲ್ಲಿ ದಾಖಲಿಸಿದ್ದಾರೆ.
ಆಕಾಶ್ ಮಾಧ್ವಲ್ರ ಈ ಸಾಧನೆಗೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಅಭಿನಂದಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಕುಂಬ್ಳೆ, ಹೆಚ್ಚಿನ ಒತ್ತಡದ ಪಂದ್ಯದಲ್ಲಿ ಅದ್ಭುತ ಬೌಲಿಂಗ್, ಆಕಾಶ್ ಮಧ್ವಲ್. 5/5 ಕ್ಲಬ್‌ಗೆ ಸುಸ್ವಾಗತ ಎಂದು ಬರೆದುಕೊಂಡಿದ್ದಾರೆ. ಸದ್ಯ ಗೆದ್ದು ಎರಡನೇ ಹಂತದ ಕ್ವಾಲಿಫೈರ್ಗೆ ಲಗ್ಗೆ ಇಟ್ಟಿರುವ ಮುಂಬೈ, ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ:ಮುಂಬೈ ಇಂಡಿಯನ್ಸ್ಗೆ 81 ರನ್ ಜಯ: ಐಪಿಎಲ್ನಿಂದ ಲಖನೌ 'ಎಲಿಮಿನೇಟ್'