ಕರ್ನಾಟಕ

karnataka

ರಾಜಸ್ಥಾನದ ಗೆಲುವು ಕಸಿದ ಸಂದೀಪ್ ಶರ್ಮಾ Noಬಾಲ್​: ಸನ್​ರೈಸರ್ಸ್​ ಪ್ಲೇ ಆಫ್ ಹಾದಿ ಹೀಗಿದೆ..

By

Published : May 8, 2023, 11:59 AM IST

ನಿನ್ನೆ ನಡೆದ ಪಂದ್ಯದಲ್ಲಿ ಅಬ್ದುಲ್​ ಸಮದ್​ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ರಾಜಸ್ಥಾನದ ಗೆಲುವು ಕಸಿದ ನೋಬಾಲ್
ರಾಜಸ್ಥಾನದ ಗೆಲುವು ಕಸಿದ ನೋಬಾಲ್

ಜೈಪುರದಲ್ಲಿ ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಕೊನೆಯ ಎಸೆತದ ಸಿಕ್ಸರ್​ ಮೂಲಕ ರೋಚಕ ಜಯ ದಾಖಲಿಸಿತು. ಪಂದ್ಯದ ಅಂತಿಮ ಓವರ್​ನ ಅಂತಿಮ ಎಸೆತದಲ್ಲಿ ಹೈದರಾಬಾದ್​ ಗೆಲುವಿಗೆ 5 ರನ್‌ ಬೇಕಿತ್ತು. ಈ ವೇಳೆ ಸಂದೀಪ್ ಶರ್ಮಾ ಬೌಲಿಂಗ್​ ಮಾಡುತ್ತಿದ್ದರು. ಅಬ್ದುಲ್ ಸಮದ್ ಸ್ಟ್ರೈಕ್​ನಲ್ಲಿದ್ದರು. ಸಂದೀಪ್​ ಎಸೆದ ಕೊನೆಯ ಎಸೆತವನ್ನು ಸಮದ್​ ಸಿಕ್ಸರ್​ಗಟ್ಟಲು​ ಯತ್ನಿಸಿದ್ದರು. ಈ ವೇಳೆ ಜಾಸ್​ ಬಟ್ಲರ್​ ಕ್ಯಾಚ್​ ಹಿಡಿದರು. ರಾಜಸ್ಥಾನ ಅಭಿಮಾನಿಗಳು ತಂಡ ಜಯಿಸಿತೆಂದು ಸಂಭ್ರಮಿಸಿದರು. ಆದರೆ ಅಂಪೈರ್ ಆ ಎಸೆತವನ್ನು ನೋ ಬಾಲ್ ಎಂದು ಸಿಗ್ನಲ್​ ಕೊಟ್ಟು ಫ್ರೀ ಹಿಟ್​ ನೀಡಿದರು. ಇದರಿಂದ ಪಂದ್ಯ ಮತ್ತಷ್ಟು ರೋಚಕತೆಗೆ ತಿರುಗಿತು.

ಸಂದೀಪ್​ ಮತ್ತೊಮ್ಮೆ ಬಿಗಿ ಬೌಲಿಂಗ್​ ದಾಳಿ ನಡೆಸಲು ಮುಂದಾದರು. ಸ್ಟ್ರೈಕ್‌ನಲ್ಲಿದ್ದ ಸಮದ್​ ಈ ವೇಳೆ ಯಾವುದೇ ತಪ್ಪು ಮಾಡದೇ ಚೆಂಡನ್ನು ನೇರವಾಗಿ ಸಿಕ್ಸರ್‌ಗಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಕೊನೆಯ ಎಸೆತದ ನೋಬಾಲ್​ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಈ ಹಿಂದೆ ನಡೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ ಬಿಗಿ ಬೌಲಿಂಗ್​ ಮಾಡಿದ್ದ ಸಂದೀಪ್​ ಶರ್ಮಾ ರಾಜಸ್ಥಾನ ಗೆಲುವಿಗೆ ಕಾರಣರಾಗಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ ಅದು ಸಾಧ್ಯವಾಗಲಿಲ್ಲ.

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ್ದ ರಾಜಸ್ಥಾನ್​ ಪರ ಜೋಸ್ ಬಟ್ಲರ್ (95) ಮತ್ತು ಸಂಜು ಸ್ಯಾಮ್ಸನ್ (66) ಸ್ಪೋಟಕ ಬ್ಯಾಟಿಂಗ್​ ನೆರವಿನಿಂದ ತಂಡ 20 ಓವರ್​ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿ ಸವಾಲಿನ ಮೊತ್ತ ದಾಖಲಿಸಿತು. ಇದಕ್ಕೆ ಪ್ರತಿಯಾಗಿ ಹೈದರಾಬಾದ್​ ಪರ ಅಭಿಷೇಕ್ ಶರ್ಮಾ (55), ರಾಹುಲ್ ತ್ರಿಪಾಠಿ (47), ಅನ್ಮೋಲ್​ಪ್ರೀತ್​ ಸಿಂಗ್​ (33) ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ರಾಜಸ್ಥಾನ್​ ಪರ ಯಜುವೇಂದ್ರ ಚಹಾಲ್ (4/29) ನಾಲ್ಕು ವಿಕೆಟ್‌ಗಳನ್ನು ಪಡೆದರು.

ಸನ್​ರೈಸರ್ಸ್​ ಪ್ಲೇ ಆಫ್ ಹಾದಿ ಹೇಗಿದೆ?:ಈ ಋತುವಿನಲ್ಲಿ ಇದುವರೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡ 10 ಪಂದ್ಯಗಳನ್ನು ಆಡಿದೆ. 4 ರಲ್ಲಿ ಗೆಲುವು ದಾಖಲಿಸಿ, 6ರಲ್ಲಿ ಸೋಲು ಕಂಡಿದೆ. -0.475 ನೆಟ್​ ರನ್​ರೇಟ್​ನೊಂದಿಗೆ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಹೈದರಾಬಾದ್​ಗೆ ಇನ್ನು 4 ಪಂದ್ಯಗಳು ಮಾತ್ರ ಬಾಕಿ ಇವೆ. ಕೊನೆಯ ನಾಲ್ಕು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ನಂತರ 16 ಅಂಕಗಳನ್ನು ಗಳಿಸಲಿದೆ. ಇದರ ಹೊರತಾಗಿಯೂ, ಮಾರ್ಕ್ರಾಮ್ ನೇತೃತ್ವದ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಲು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಸನ್‌ರೈಸರ್ಸ್ ತಂಡವು ತಮ್ಮ ರನ್ ರೇಟ್ ಅನ್ನು ಸುಧಾರಿಸಲು ಪ್ರಯತ್ನಿಸಬೇಕಿದೆ. ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಉಳಿದ ಪಂದ್ಯಗಳಲ್ಲಿ ಸೋತದ್ದೇ ಆದಲ್ಲಿ ಸನ್‌ರೈಸರ್ಸ್ ಪ್ಲೇ ಆಫ್​ಗೆ ತಲುಪಬಹುದು.

ಇದನ್ನೂ ಓದಿ:GT vs LSG: ಲಕ್ನೋ ವಿರುದ್ಧ ಗೆದ್ದು ಪ್ಲೇ ಆಫ್​ ಸನಿಹ ತಲುಪಿದ ಗುಜರಾತ್​

ABOUT THE AUTHOR

...view details