ಹೈದರಾಬಾದ್:ಇಲ್ಲಿನರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ (ಗುರುವಾರ) ನಡೆದ ಸನ್‌ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ರನ್ ಚೇಸ್‌ನಲ್ಲಿ ಅಬ್ಬರದ ಶತಕ ಬಾರಿಸಿದ ಗೇಮ್ ಚೇಂಜರ್ ವಿರಾಟ್ ಕೊಹ್ಲಿ ಭಾರಿ ಮೆಚ್ಚುಗೆ ಗಳಿಸಿದರು. ಪಂದ್ಯದ ಬಳಿಕ ಅವರು ಪತ್ನಿ ಅನುಷ್ಕಾ ಶರ್ಮಾರಿಗೆ ವಿಡಿಯೋ ಕರೆ ಮಾಡಿ ಮಾತನಾಡಿ ಗಮನ ಸೆಳೆದರು.
ಪ್ಲೇ ಆಫ್ ಹಾದಿ ಸುಗಮಗೊಳ್ಳಲು ಬೆಂಗಳೂರು ತಂಡಕ್ಕೆ ಈ ಪಂದ್ಯ ನಿರ್ಣಾಯಕವಾಗಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಹೆನ್ರಿಕ್ ಕ್ಲಾಸೆನ್ ಅವರ ಸಿಡಿಲಬ್ಬರದ ಶತಕದೊಂದಿಗೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ಗಳನ್ನು ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ್ದ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಪ್ ಡುಪ್ಲೆಸಿಸ್ ಅವರ ಅಮೋಘ ಜೊತೆಯಾಟದ ನೆರವಿನಿಂದ ಗೆಲುವಿನ ದಡ ತಲುಪಿತು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಾಲ್ಕು ವರ್ಷಗಳ ಬಳಿಕ ರನ್ ಮಷಿನ್ ಕೊಹ್ಲಿ ಶತಕ ಸಿಡಿಸಿದ್ದಾರೆ. 2019ರ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಂಚುರಿ ಬಾರಿಸಿದ್ದರು. 2023ರ ಆವೃತ್ತಿಯ ಇದು ಅವರ ಮೊದಲ ಶತಕವಾಗಿದೆ. 62 ಎಸೆತಗಳಲ್ಲಿ 100 ರನ್ ಸಿಡಿಸುವ ಮೂಲಕ ಐಪಿಎಲ್ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಕ್ರಿಸ್ ಗೇಲ್ ಅವರ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ್ದಾರೆ. ಕ್ರಿಸ್ ಗೇಲ್ 6 ಶತಕ ಬಾರಿಸಿದ್ದಾರೆ.