ಮುಂಬೈ: 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ ಕೊನೆ ವಾರದಿಂದ ಆರಂಭಗೊಳ್ಳಲಿದ್ದು, ಮೇ ತಿಂಗಳ ಅಂತ್ಯದವರೆಗೆ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿ ಇಂದು ಐಪಿಎಲ್ನ ಎಲ್ಲ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿತು. ಇದಾದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಭಾಗಿಯಾಗಿ ಜಯ್ ಶಾ ಮಾತನಾಡಿದರು. ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಬೇಕೆಂದು ಅನೇಕ ತಂಡದ ಮಾಲೀಕರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಹೀಗಾಗಿ, ಭಾರತದಲ್ಲೇ ಮಹಾಟೂರ್ನಿ ನಡೆಸಲು ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಹಮದಾಬಾದ್ ಮತ್ತು ಲಕ್ನೋ ತಂಡಗಳು ಐಪಿಎಲ್ನಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದು, 2022ರ ಆವೃತ್ತಿ ನಡೆಸಲು ಬಿಸಿಸಿಐ ಉತ್ಸುಕವಾಗಿದೆ. ಭಾರತೀಯ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಂಡಿಲ್ಲ. ದೇಶದಲ್ಲಿ ಕೋವಿಡ್ ಹೊಸ ರೂಪಾಂತರ ಕಾಣಿಸಿಕೊಂಡಿರುವ ಕಾರಣ ಇದೀಗ ಟೂರ್ನಿ ನಡೆಸಲು ಪ್ಲಾನ್ ಬಿ ರೂಪಿಸಲಾಗಿದೆ ಎಂದರು.