ಐಪಿಎಲ್ ಮೆಗಾ ಹರಾಜಿನಲ್ಲಿ ಖರೀದಿಯಾಗದ ಮತ್ತು ಉಳಿದ ಆಟಗಾರರನ್ನು ಖರೀದಿಸಲು ಕಿರು ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ಮುಂದಾಗಿದ್ದು, ಎಲ್ಲ ಪ್ರಾಂಚೈಸಿಗಳು ತಾವು ಉಳಿಸಿಕೊಂಡ ಆಟಗಾರರ ಪಟ್ಟಿ ನೀಡಲು ಕೋರಿದೆ.
ಐಪಿಎಲ್-2023 ಸಿದ್ಧತೆಯ ಭಾಗವಾಗಿ ಈ ಕಿರು ಹರಾಜು ನಡೆಸಲಾಗುತ್ತಿದೆ. ಈ ವರ್ಷದ ಕೊನೆಯ ತಿಂಗಳು ಡಿಸೆಂಬರ್ನಲ್ಲಿ ಮಿನಿ ಹರಾಜು ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನೂ ಯಾವುದೇ ದಿನಾಂಕ ನಿಗದಿ ಮಾಡಿಲ್ಲ. ನವೆಂಬರ್ 15 ರೊಳಗೆ ಫ್ರಾಂಚೈಸಿಗಳಿಗೆ ಎಲ್ಲ ಆಟಗಾರರ ಪಟ್ಟಿ ನೀಡಲು ಸೂಚಿಸಲಾಗಿದೆ.
ಮೆಗಾ ಹರಾಜಿಗೂ ಮೊದಲು ಎಲ್ಲ ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಈ ಮಿನಿ ಹರಾಜಿನಲ್ಲಿ ಅಂತಹ ಆಯ್ಕೆ ಇರುವುದಿಲ್ಲ. ತಂಡ ಹಿಂದಿನ ಹರಾಜಿನಲ್ಲಿ ಖರ್ಚು ಮಾಡಿದ ಹಣದ ಮೇಲೆ ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ ಖರ್ಚು ಮಾಡಲು ಈ ಬಾರಿ ಅವಕಾಶವಿದೆ. ಇದು 95 ಕೋಟಿ ರೂಪಾಯಿ ದಾಟಬಾರದು ಎಂಬ ನಿಯಮ ವಿಧಿಸಲಾಗಿದೆ.
ತಂಡಗಳ ಬಳಿ ಉಳಿದ ಹಣವೆಷ್ಟು?:ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಬಿಡ್ ಮಾಡಿದ ಬಳಿಕ ಈಗ ಪ್ರತಿ ತಂಡಗಳಲ್ಲಿ ಕಡಿಮೆ ಹಣ ಉಳಿದಿದೆ. ಇದರಲ್ಲಿ ಪಂಜಾಬ್ ಕಿಂಗ್ಸ್ 3.45 ಕೋಟಿ ರೂಪಾಯಿ ಉಳಿಸಿಕೊಂಡಿದ್ದು, ಅತ್ಯಧಿಕವಾಗಿದೆ. ಹಾಗೆಯೇ ಲಖನೌ ಸೂಪರ್ ಜೈಂಟ್ಸ್ ತನ್ನೆಲ್ಲಾ ಹಣವನ್ನು ಬಿಡ್ನಲ್ಲಿ ಬಳಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 1.55 ಕೋಟಿ, ರಾಜಸ್ಥಾನ್ ರಾಯಲ್ಸ್ 0.95 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ 0.45 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ 2.95 ಕೋಟಿ, ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಬಳಿ 0.15 ಕೋಟಿ ಉಳಿದಿದ್ದರೆ, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಲಾ 0.10 ಕೋಟಿ ರೂಪಾಯಿ ಹಣವನ್ನು ಹೊಂದಿವೆ.