ಬೆಂಗಳೂರು:ಐಪಿಎಲ್ ಮೆಗಾ ಹರಾಜು ವೇಳೆ ಹರಾಜುದಾರ ಹ್ಯೂ ಎಡ್ಮರ್ಡ್ಸ್ ದಿಢೀರ್ ಕುಸಿದು ಬಿದ್ದು, ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ಪ್ರಸ್ತುತ ಮಾಹಿತಿಯ ಪ್ರಕಾರ ಅವರು ಚೇತರಿಸಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರು ಹರಾಜು ನಡೆಸುವ ಸ್ತಿತಿಯಲ್ಲಿ ಇಲ್ಲದಿರುವುದರಿಂದ ಹಿರಿಯ ನಿರೂಪಕ , ಕಮೆಂಟೇಟರ್ ಚಾರೂ ಶರ್ಮಾ 3:30ಕ್ಕೆ ಹರಾಜು ಪ್ರಕ್ರಿಯೆಯನ್ನು ಮುಂದುವರಿಸಲಿದ್ದಾರೆ
ಶನಿವಾರ ಬೆಂಗಳೂರಿನಲ್ಲಿ ಮೊದಲ ದಿನದ ಹರಾಜು ನಡೆಯುತ್ತಿದ್ದು ದಿಢೀರ್ ಕುಸಿದುಬಿದ್ದಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ಹರಾಜು ಸಭಾಂಗಣದಲ್ಲಿ ನೆರೆದಿದ್ದವರೆಲ್ಲಾ ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದರು. ಪ್ರಸ್ತುತ ಬಿಸಿಸಿಐ ಮೂಲಗಳ ಪ್ರಕಾರ ಹ್ಯೂ ಚೇತರಿಸಿಕೊಂಡಿದ್ದು, ಸ್ಥಗಿತಗೊಂಡಿರುವ ಹರಾಜು ಪ್ರಕ್ರಿಯೆಯನ್ನು 3.30ಕ್ಕೆ ಪುನಾರಂಭವಾಗಲಿದೆ ಎಂದು ತಿಳಿದುಬಂದಿದೆ.
" ಐಪಿಎಲ್ ಹರಾಜುದಾರರಾದ ಎಡ್ಮೀಡ್ಸ್ ಅವರು ಇಂದು ಮಧ್ಯಾಹ್ನದ ಐಪಿಎಲ್ ಹರಾಜಿನ ಸಮಯದಲ್ಲಿ ಪಾಸ್ಟರಲ್ ಹೈಪೊಟೆನ್ಶನ್‌ನಿಂದ(ರಕ್ತದೊತ್ತಡ) ಕುಸಿದು ಬಿದ್ದಿದ್ದರು.ಘಟನೆಯ ನಂತರ ವೈದ್ಯಕೀಯ ತಂಡವು ತಕ್ಷಣವೇ ಅವರಿಗೆ ಚಿಕಿತ್ಸೆ ನೀಡಿದೆ ಪ್ರಸ್ತುತ ಅವರು ಸ್ಥಿರವಾಗಿದ್ದಾರೆ. ಚಾರು ಶರ್ಮಾ ಅವರು ಇಂದು ಹರಾಜು ಪ್ರಕ್ರಿಯೆಗಳನ್ನು ಮುಂದುವರೆಸುತ್ತಾರೆ" ಐಪಿಎಲ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ಲೆಜೆಂಡರಿ ಎಡ್ಮರ್ಡ್ಸ್ ತಮ್ಮ 37 ವರ್ಷಗಳ ವೃತ್ತಿ ಜೀವನದಲ್ಲಿ ಐತಿಹಾಸಿಕ ಕಲಾಕೃತಿಗಳು, ವಿಂಟೇಜ್ ಕಾರುಗಳು ಸೇರಿದಂತೆ ಸುಮಾರು 2700ಕ್ಕೂ ಹೆಚ್ಚು ಹರಾಜುಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಹರಾಜು ಪಟ್ಟಿಯಲ್ಲಿ ಒಟ್ಟು 600 ಆಟಗಾರರಿದ್ದು, ಇದರಲ್ಲಿ 10 ಫ್ರಾಂಚೈಸಿಗಳು 212 ಆಟಗಾರರನ್ನು ಖರೀದಿಸಲಿವೆ. ಈಗಾಗಲೆ ಮೂಲಬೆಲೆ 2 ಕೋಟಿ ರೂ ಹೊಂದಿರುವ ಆಟಗಾರರ ಹರಾಜು ಮುಗಿದಿದೆ.