ಹೈದರಾಬಾದ್:2024ರ ಐಪಿಎಲ್ನ ಮಿನಿ ಹರಾಜಿಗೆ ಸಕಲ ಸಿದ್ಧತೆಗಳೂ ಆಗಿದ್ದು, ಯಾವ ಆಟಗಾರ, ಯಾವ ತಂಡವನ್ನು ಸೇರುತ್ತಾನೆ ಎಂದು ಎಲ್ಲರಲ್ಲಿ ಉಳದಿರುವ ಕುತೂಹಲವಾಗಿದೆ. ದುಬೈನಲ್ಲಿ ನಾಳೆ (ಡಿ.19 ಮಂಗಳವಾರ) 333 ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ 214 ಭಾರತೀಯ ಆಟಗಾರು, 119 ವಿದೇಶಿ ಆಟಗಾರರಿದ್ದಾರೆ. ಈ ಆಟಗಾರರಲ್ಲಿ 116 ಕ್ಯಾಪ್ಡ್ ಆಟಗಾರರು ಮತ್ತು 215 ಅನ್ ಕ್ಯಾಪ್ಡ್ ಆಟಗಾರರು ಹರಾಜಿನ ಭಾಗವಾಗಲಿದ್ದಾರೆ. ಆದರೆ, 10 ತಂಡಗಳಿಗೆ ಬೇಕಾಗಿರುವುದು ಕೇವಲ 77 ಆಟಗಾರರು.
ಈ ಬಾರಿಯ ಐಪಿಎಲ್ ಹರಾಜು ಹಲವಾರು ಕುತೂಹಲಗಳಿಗೆ ಕಾರಣ ಆಗಿದೆ. ಮೊದಲನೇಯದ್ದು ವಿದೇಶದಲ್ಲಿ ಮೊದಲ ಬಾರಿಕೆ ಬಿಡ್ಡಿಂಗ್ ನಡೆಸುತ್ತಿರುವುದು. ಹಾಗೇ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆದಿರುವ ಕಾರಣ ಅಲ್ಲಿ ಮಿಂಚಿದ ಪ್ರತಿಭೆಗಳಿಗೆ ಈ ಬಾರಿ ಅವಕಾಶ ಸಿಗಲಿದೆ. ಇದರ ಜೊತೆಗೆ ಐಪಿಎಲ್ ಬೆನ್ನಲ್ಲೇ 2024ರ ಟಿ20 ವಿಶ್ವಕಪ್ ನಡೆಯಲಿರುವ ಕಾರಣ ಅದರ ತಯಾರಿ ಭಾಗವಾಗಿ ಐಪಿಎಲ್ ಪ್ರಮುಖ ವೇದಿಕೆ ಆಗಿರಲಿದೆ. ಬೇಡಿಕೆ ಅನುಸಾರ ನಾಳೆ ಯಾರು ಯಾವ ತಂಡಕ್ಕೆ ಬಿಡ್ ಆಗಬಹುದು ಎಂಬ ಪಟ್ಟಿ ಇಲ್ಲಿದೆ..
ತಂಡಗಳಿಗೆ ಸಂಭವನೀಯ ಹರಾಜು ತಂತ್ರದ ನೋಟ ಇಲ್ಲಿದೆ:
-
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ): ಆರ್ಸಿಬಿ ಬಳಿ 23.25 ಕೋಟಿ ರೂ. ಹಣ ಇದೆ. ತಂಡಕ್ಕೆ 6 ಆಟಗಾರರು ಅಗತ್ಯ ಇದ್ದು ಮೂವರು ವಿದೇಶಿಯರ ಜಾಗ ಖಾಲಿ ಇದೆ. ಆರ್ಸಿಬಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಭಾರತದ ಮಾನವ್ ಸುತಾರ್ ಮೇಲೆ ಕಣ್ಣಿಟ್ಟಿದೆ. ಆರ್ಸಿಬಿ ಈ ಬಾರಿ ಹರ್ಷಲ್ ಪಟೇಲ್ ಅವರನ್ನು ಬಿಡುಗಡೆ ಮಾಡಿತ್ತು. ಹೀಗಾಗಿ ವೇಗದ ಬೌಲಿಂಗ್ ವಿಭಾಗಕ್ಕೆ ತಂಡ ಆಟಗಾರರನ್ನು ನೋಡುತ್ತಿದೆ. ಆಸ್ಟ್ರೇಲಿಯಾದ ವೇಗಿಗಳ ಮೇಲೆ ಆರ್ಸಿಬಿ ಕಣ್ಣಿಟ್ಟಿರುವುದಲ್ಲದೇ, ಮೊ ಬೊಬಾಟ್, ಇಂಗ್ಲೆಂಡ್ನ ಗಸ್ ಅಟ್ಕಿನ್ಸನ್ ಅಥವಾ ರೀಸ್ ಟೋಪ್ಲಿ ಸಹ ಆಯ್ಕೆಯಲ್ಲಿರುವ ಸಾಧ್ಯತೆ ಇದೆ.
- ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ): ತಂಡದ ಬಳಿ 31.4 ಕೋಟಿ ರೂ ಹಣ ಇದ್ದು, ಒಟ್ಟು 6 ಆಟಗಾರರು ಅಗತ್ಯವಿದೆ. ಅದರಲ್ಲಿ 3 ವಿದೇಶಿಗರು. ಸಿಎಸ್ಕೆ ಶಾರ್ದೂಲ್ ಠಾಕೂರ್, ಮನೀಶ್ ಪಾಂಡೆ, ಜೋಶ್ ಹ್ಯಾಜಲ್‌ವುಡ್ ಮೇಲೆ ಹೆಚ್ಚಿನ ಬಿಡ್ ಮಾಡುವ ಸಾಧ್ಯತೆ ಇದೆ. ಶಾರ್ದೂಲ್ ಠಾಕೂರ್ ಅವರು ಈ ಹಿಂದೆ ಸಿಎಸ್ಕೆ ಪರ ಆಡಿದ್ದರೆ. ಅನುಭವಿ ಆಟಗಾರ ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಶಾರ್ದೂಲ್ಗೆ 10 ಕೋಟಿಗೂ ಹೆಚ್ಚಿನ ಬೆಲೆ ಕೊಡಲು ಸಿಎಸ್ಗೆ ಮುಂದೆ ಬರಬಹುದು. ಅಂಬಟಿ ರಾಯುಡು ಬದಲಿಗೆ ಮನೀಶ್ ಪಾಂಡೆ ಅವರನ್ನು ಸಿಎಸ್ಕೆ ಆದ್ಯತೆಯಾಗಿ ನೋಡುವ ಸಾಧ್ಯತೆ ಇದೆ. ವಿದೇಶಿ ಆಟಗಾರರ ಪೈಕಿ ಅನುಭವಿ ಜೋಶ್ ಹ್ಯಾಜಲ್ವುಡ್ಗೆ ಅವಕಾಶ ನೀಡಬಹುದು.
- ದೆಹಲಿ ಕ್ಯಾಪಿಟಲ್ಸ್ (ಡಿಸಿ): ತಂಡಕ್ಕೆ 9 ಆಟಗಾರರು ಬೇಕಿದ್ದು, ಅದರಲ್ಲಿ 4 ವಿದೇಶಿಗರಾಗಿದ್ದಾರೆ. ಡಿಸಿ ಬಳಿ 28.95 ಕೋಟಿ ರೂ. ಹಣವಿದೆ. ತಂಡ ಪ್ರಿಯಾಂಶ್ ಆರ್ಯ, ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್, ಜೋಸ್ ಇಂಗ್ಲಿಸ್, ವನಿಂದು ಹಸರಂಗ ಅವರ ಬಿಡ್ಗೆ ಪ್ರಯತ್ನಿಸಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಬಲ ಹೊಂದಿಲ್ಲ. ಹೀಗಾಗಿ ಅದರತ್ತ ಗಮನ ಹರಿಸುತ್ತಿದೆ. ಹೀಗಾಗಿ ಯುಪಿಸಿಎ ಟಿ20 ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರ ಮೇಲೆ ತಂಡ ಕಣ್ಣಿಟ್ಟಿದ್ದು, ಪ್ರಿಯಾಂಶ್ ಆರ್ಯ, ಸಮೀರ್ ರಿಜ್ವಿ ಮತ್ತು ಸ್ವಸ್ತಿಕ್ ಚಿಕ್ಕಾರ ಅವರ ಆಯ್ಕೆಗೆ ಒಂದು ಹೆಜ್ಜೆ ಮುಂದೆ ಇದೆ. ಮಧ್ಯಮ ಕ್ರಮಾಂಕದ ವೇಗಿಗಳಿಗೆ ಫಿರೋಜ್ ಶಾ ಕೋಟ್ಲಾ ಉತ್ತಮವಾಗಿರುವುದರಿಂದ ಹರ್ಷಲ್ ಪಟೇಲ್ ಬೌಲಿಂಗ್ ಆಯ್ಕೆ ಆಗಬಹುದು.
- ಗುಜರಾತ್ ಟೈಟಾನ್ಸ್ (ಜಿಟಿ):ತಂಡದ ಬಳಿ 38.15 ಕೋಟಿ ರೂ ಇದೆ. 8 ಜನ ಆಟಗಾರರ ಅವಶ್ಯಕತೆ ಇದ್ದು, ಅದರಲ್ಲಿ 2 ವಿದೇಶಿಗರಿಗೆ ಸ್ಥಾನ ಇದೆ. ಶಾರ್ದೂಲ್ ಠಾಕೂರ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಅಜ್ಮತುಲ್ಲಾ ಒಮರ್ಜಾಯ್ ಮೇಲೆ ತಂಡ ಆಸಕ್ತಿ ನೆಟ್ಟಿದೆ. ಹಾರ್ದಿಕ್ ಬದಲಿಗೆ ಅಲ್ರೌಂಡರ್ ನೋಡುತ್ತಿರುವ ತಂಡ ಶಾರ್ದೂಲ್ ಖರೀದಿಗೆ ದೊಡ್ಡ ಮೊತ್ತ ಹೂಡುವ ನಿರೀಕ್ಷೆ ಇದೆ. ಹಾಗೇ ವಿದೇಶಿಯರ ಆಯ್ಕೆಯಲ್ಲಿ ರಚಿನ್ ರವೀಂದ್ರ ಮೊದಲಿಗರಾಗಬಹುದು.
- ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್): ತಂಡದಲ್ಲಿ 32.70 ಕೋಟಿ ರೂ ಇದ್ದು 12 ಆಟಗಾರರು ಬೇಕಾಗಿದ್ದಾರೆ. ಅದರಲ್ಲಿ 4 ವಿದೇಶಿಯರನ್ನು ಬಿಡ್ ಮಾಡಬೇಕಿದೆ. ನೂತನ ಮೆಂಟರ್ ಆಗಿ ಆಯ್ಕೆ ಆಗಿರುವ ಗೌತಮ್ ಗಂಭೀರ್ ಕಣ್ಣು ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ರಚಿನ್ ರವೀಂದ್ರ, ಹರ್ಷಲ್ ಪಟೇಲ್ ಮೇಲಿದೆ. ತಂಡಕ್ಕೆ ವಿದೇಶಿ ವೇಗಿಗಳ ಅಗತ್ಯ ಇದ್ದು ಇದಕ್ಕಾಗಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಅಥವಾ ಜೋಸ್ ಹೇಜಲ್‌ವುಡ್ ಜೊತೆಗೆ ಹರ್ಷಲ್ ಪಟೇಲ್ ಮೇಲೆ ಬಿಡ್ಗೆ ಪೈಪೋಟಿ ನಡೆಸುವ ಸಾಧ್ಯತೆ ಇದೆ.
- ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ):ತಂಡದ ಬಳಿ 13.15 ಕೋಟಿ ರೂ ಹಣ ಇದೆ. 6 ಆಟಗಾರರ ಅವಶ್ಯಕತೆ ಇದ್ದು, 2 ವಿದೇಶಿಯರು ಬೇಕಾಗಿದ್ದಾರೆ. ತಂಡ ಜೆರಾಲ್ಡ್ ಕೋಟ್ಜಿ, ದಿಲ್ಶನ್ ಮಧುಶಂಕ, ಅಶುತೋಷ್ ಶರ್ಮಾ ಅವರ ಮೇಲೆ ಬಿಡ್ ಮಾಡುವ ಸಾಧ್ಯತೆ ಇದೆ. ಲಖನೌ ಮಾರ್ಕ್ ವುಡ್ ಜೊತೆಗೆ ಮತ್ತೊಂಬ್ಬ ವೇಗದ ಬೌಲಿಂಗ್ ಆಯ್ಕೆ ನೋಡುತ್ತಿದೆ. ಹೀಗಾಗಿ ಸ್ಟಾರ್ಕ್, ಹೇಜಲ್‌ವುಡ್ ಮತ್ತು ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೋಟ್ಜಿ ಮೇಲೆ ಬಿಡ್ಗೆ ಹೋಗುವ ನಿರೀಕ್ಷೆ ಇದೆ. ಎಡಗೈ ವೇಗಿಗಳಲ್ಲಿ ನಾಂದ್ರೆ ಬರ್ಗರ್ ಮತ್ತು ದಿಲ್ಶನ್ ಮಧುಶಂಕ ಕಡೆ ನೋಡಿದರೆ, ಭಾರತೀಯ ಬ್ಯಾಟರ್ ಅಶುತೋಷ್ ಶರ್ಮಾ ಮೇಲೂ ತಂಡದ ಕಣ್ಣಿದೆ.
- ಮುಂಬೈ ಇಂಡಿಯನ್ಸ್ (ಎಂಐ):17.75 ಕೋಟಿ ರೂ ತಂಡದಲ್ಲಿದೆ. 8 ಆಟಗಾರರು ತಂಡಕ್ಕೆ ಬೇಕಿದ್ದು, ಅದರಲ್ಲಿ 4 ಜನ ವಿದೇಶಿಗರ ಆಯ್ಕೆ ಆಗಬೇಕಿದೆ. ಹಸರಂಗ, ಮಾನವ್ ಸುತಾರ್, ಅಶುತೋಷ್ ಶರ್ಮಾ, ದರ್ಶನ್ ಮಿಸಾಲ್ ಅವರ ಆಯ್ಕೆಗೆ ತಂಡ ಬಿಡ್ ಪೈಪೋಟಿ ನಡೆಸುವ ಸಾಧ್ಯತೆ ಇದೆ. ಹಾರ್ದಿಕ್ ಖರೀದಿಗೆ ಹೆಚ್ಚಿನ ಹಣ ಹಾಕಿದ ಕಾರಣ ತಂಡದ ಬಳಿ ಹಣ ಕಡಿಮೆ ಇದೆ. ಹೀಗಾಗಿ ತಂಡ ಅನ್‌ಕ್ಯಾಪ್ಡ್ ಆಟಗಾರರ ಕಡೆ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ.
- ಸನ್‌ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್):34 ಕೋಟಿ ರೂ ತಂಡದ ಬಳಿ ಇರುವ ಮೊತ್ತ. 6 ಆಟಗಾರರು ತಂಡಕ್ಕೆ ಬೇಕಾಗಿದ್ದು, 2 ವಿದೇಶಿಗರು. ತಂಡ ವಿದೇಶಿ ಅಥವಾ ದೇಶಿ ಇನ್ನೊಬ್ಬ ಆರಂಭಿಕ ಆಟಗಾರನ ಹುಡುಕಾಟದಲ್ಲಿದೆ. ಬೌಲಿಂಗ್ ಕ್ಷೇತ್ರವನ್ನು ಬಲ ಪಡಿಸಿಕೊಳ್ಳಲು ಹಸರಂಗ ಮತ್ತು ಪಟೇಲ್ ಇವರ ಆಯ್ಕೆಯ ಭಾಗವಾಗಬಹುದು.
- ಪಂಜಾಬ್ ಕಿಂಗ್ಸ್ (ಪಿಬಿಕೆಎಸ್):ತಂಡದ ಬಳಿ 29.10 ಕೋಟಿ ರೂ ಇದ್ದು, 2 ವಿದೇಶಿಗರು ಸೇರಿದಂತೆ 8 ಆಟಗಾರರ ಅವಶ್ಯಕತೆ ಇದೆ. ತಂಡ ಶಾರ್ದೂಲ್, ಹರ್ಷಲ್, ರಚಿನ್ ರವೀಂದ್ರ ಮೇಲೆ ಬಿಡ್ಗೆ ಪೈಪೋಟಿ ನಡೆಸಬಹುದಾಗಿದೆ. ಪಂಜಾಬ್ ವಿದೇಶಿ ಒಬ್ಬನನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ರಚಿನ್ ಮೇಲೆ ಹೆಚ್ಚಿನ ಹಣಹಾಕಲು ತಂಡ ಸಿದ್ಧವಿದೆ. ಗುಣಮಟ್ಟದ ಭಾರತೀಯ ವೇಗಿಗಳ ಆಯ್ಕೆಗೆ ಹರ್ಷಲ್, ಶಾರ್ದೂಲ್ ಮತ್ತು ಉಮೇಶ್ ಯಾದವ್ಗೆ ಬಿಡ್ ಮಾಡಬಹುದು.
- ರಾಜಸ್ಥಾನ್ ರಾಯಲ್ಸ್ (ಆರ್ಆರ್):ತಂಡದ ಬಳಿ ಕಡಿಮೆ ಎಂದರೆ 14.50 ಕೋಟಿ ಮಾತ್ರ ಇದೆ. ತಂಡಕ್ಕೆ 3 ವಿದೇಶಿಗರು ಸೇರಿ 8 ಆಟಗಾರರು ಬೇಕಾಗಿದ್ದಾರೆ. ಆರ್ಆರ್ ಮುಖ್ಯವಾಗಿ ಸಮೀರ್ ರಿಜ್ವಿ, ಸ್ವಸ್ತಿಕ್ ಚಿಕ್ಕಾರ, ಅಶುತೋಷ್ ಶರ್ಮಾ, ಅಭಿಮನ್ಯು ಸಿಂಗ್, ಸೌರಭ್ ಚೌಹಾಣ್ ಅವರಂತಹ ದೇಶೀಯ ಭಾರತೀಯ ಬ್ಯಾಟರ್‌ಗಳ ಮೇಲೆ ಕೇಂದ್ರೀಕರಿಸಿ ಬಿಡ್ ಮಾಡಲಿದೆ. ಆರ್ಆರ್ ದೇಶೀಯ ಆಟಗಾರರ ಮೇಲೆ ಹೆಚ್ಚು ಕೇಂದ್ರೀಕರಿಸಲಿದ್ದು, ಸೈಯದ್ ಮುಷ್ತಾಕ್ ಅಲಿ, ಟಿಎನ್‌ಪಿಎಲ್, ಯುಪಿ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಪ್ರತಿಭೆಗಳನ್ನು ಬಿಡ್ನಲ್ಲಿ ಆಯ್ಕೆ ಮಾಡಲಿದೆ.
ಇದನ್ನೂ ಓದಿ:ಟೆಸ್ಟ್ ಕ್ರಿಕೆಟ್ನಲ್ಲಿ '500 ವಿಕೆಟ್ ಕ್ಲಬ್' ಸೇರಿದ ನಾಥನ್ ಲಿಯಾನ್!