ಕೋಲ್ಕತ್ತಾ:ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಗಿದ್ದು, ಪ್ರತಿಯೊಬ್ಬರು ಭಾರತ ತಂಡಕ್ಕಾಗಿ ಆಡುವುದಕ್ಕಾಗಿ ಗಮನ ಹರಿಸಬೇಕು ಮತ್ತು ದೇಶಕ್ಕೆ ಗೌರವ ತಂದುಕೊಡುವ ಕಾರ್ಯವನ್ನು ಮಾಡಬೇಕು ಎಂದು ಮಂಗಳವಾರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಬುಧವಾರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ-20 ಸರಣಿ ಆರಂಭವಾಗಲಿದೆ. ಟಿ-20 ವಿಶ್ವಕಪ್ನಲ್ಲಿ ಭಾರತ ತಂಡ ನಿರಾಶೆ ಮೂಡಿಸಿದ್ದು, ಮೆನ್ ಇನ್ ಬ್ಲೂ ತಮ್ಮ ವೈಫಲ್ಯಗಳನ್ನು ಸರಿಪಡಿಸಿಕೊಂಡು ಆಸ್ಟ್ರೇಲಿಯಾದಲ್ಲಿ ನಡೆಯುವ 2022ರ ಟಿ-20 ವಿಶ್ವಕಪ್ಗಾಗಿ ತಯಾರಿ ನಡೆಸಬೇಕಿದೆ.
" ಹರಾಜಿಗೂ ಮುನ್ನ ಹುಡುಗರು ಐಪಿಎಲ್‌ನಲ್ಲಿ ತಾವೂ ಯಾವ ತಂಡಕ್ಕಾಗಿ ಆಡಲಿದ್ದೇವೆ ಎಂದು ತಮ್ಮೊಳಗೆ ಕೆಲವು ಭಾವನಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಹರಾಜು ಮುಗಿದಿರುವುದರಿಂದ ಅದೆಲ್ಲವನ್ನು ನಿನ್ನೆಗೆ ಅಂತ್ಯ ಮಾಡಬೇಕು. ಈಗಾಗಲೇ ನಾವು ಎಲ್ಲರೊಂದಿಗೆ ಸಭೆ ನಡೆಸಿದ್ದೇವೆ ಮತ್ತು ನಾವು ಮುಂದಿನ ಎರಡು ವಾರಗಳ ಕಾಲ ನಾವೆಲ್ಲರೂ ನೀಲಿ ಬಣ್ಣದ ಮೇಲೆ ಕೇಂದ್ರೀಕರಿಸಬೇಕು ಮತ್ತು ಮುಂದಿನ ಎರಡು ವಾರಗಳ ಕಾಲ ಅವರು ಭಾರತಕ್ಕಾಗಿ ಆಡುವತ್ತ ಗಮನಹರಿಸಬೇಕು ಎಂದು ಪ್ರತಿಯೊಬ್ಬರಿಗೂ ನಾವು ಹೇಳಿದ್ದೇವೆ " ಎಂದು ರೋಹಿತ್ ವರ್ಚುಯಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇಶಾನ್ ಕಿಶನ್ರನ್ನು ಮುಂಬೈ ಇಂಡಿಯನ್ಸ್ 15.5 ಕೋಟಿ ರೂ ನೀಡಿ ಖರೀದಿಸಿದ್ದರ ಬಗ್ಗೆ ಕೇಳಿದ್ದಕ್ಕೆ, ಇಲ್ಲಿ ಐಪಿಎಲ್ ಅನ್ನು ನಾವು ಪರಿಗಣಿಸುವುದಿಲ್ಲ, ಐಪಿಎಲ್‌ನಲ್ಲಿ ಆಟಗಾರರ ತಮ್ಮ ಫ್ರಾಂಚೈಸಿಗಳಿಗೆ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎನ್ನುವುದನ್ನು ನಾವು ಎದುರು ನೋಡುತ್ತಿಲ್ಲ, ಅವರು ಟೀಮ್ ಇಂಡಿಯಾಕ್ಕಾಗಿ ಎಲ್ಲಿ ಆಡಬಲ್ಲರು ಎನ್ನುವುದನ್ನು ನೋಡುತ್ತಿದ್ದೇವೆ. ನಾವು ಅದರ ಕಡೆ ಮಾತ್ರ ಗಮನ ಹರಿಸುತ್ತಿದ್ದೇವೆ. ಐಪಿಎಲ್ ಮುಂದೆ ನಡೆಯಲಿದೆ, ನಾವು ಅದನ್ನು ನಂತರ ನೋಡಿಕೊಳ್ಳಬಹುದು ಎಂದಿದ್ದಾರೆ.
ಇದನ್ನೂ ಓದಿ:ನೀವೆಲ್ಲರೂ ಕೊಹ್ಲಿ ಫಾರ್ಮ್ ಬಗ್ಗೆ ಮಾತನಾಡುವುದನ್ನ ಮೊದಲು ನಿಲ್ಲಿಸಿ.. ಆಗ ಎಲ್ಲವೂ ಸರಿಯಾಗುತ್ತದೆ : ರೋಹಿತ್ ಗರಂ