ಮುಂಬೈ (ಮಹರಾಷ್ಟ್ರ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆವೃತ್ತಿಗೆ ಪಾಂಚೈಸಿಗಳು ತಯಾರಿ ನಡೆಸಲು ಆರಂಭಿಸಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಕೋಚ್ ಮತ್ತು ನಿರ್ದೇಶಕರನ್ನು ಕೈಬಿಟ್ಟು ಹೊಸಬರಿಗೆ ಮಣೆಹಾಕಿದೆ. ಇದೀಗ ಮುಂಬೈ ಇಂಡಿಯನ್ಸ್ (ಎಂಐ) ಬೌಲಿಂಗ್ ಕೋಚ್ ಬದಲಾವಣೆ ಆಗಿದೆ. ನಾಲ್ಕು ಬಾರಿ ಚಾಂಪಿಯನ್ ಆಗಿದ್ದಾಗ ತಂಡಕ್ಕೆ ತರಬೇತಿ ನೀಡಿದ್ದ ಶೇನ್ ಬಾಂಡ್ ಅವರನ್ನು ಎರಡು ದಿನಗಳ ಕೆಳಗೆ ಎಂಐ ಕೈಬಿಟ್ಟಿತ್ತು. ಈಗ ಅವರ ಜಾಗಕ್ಕೆ ಮುಂಬೈ ಇಂಡಿಯನ್ಸ್ ಮಾಜಿ ಆಟಗಾರನನ್ನೇ ಕೋಚ್ ಆಗಿ ನೇಮಿಸಿದೆ.
ಶೇನ್ ಬಾಂಡ್ ಅವರು 9 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2015ರಿಂದ 2023ರ ವರೆಗೆ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರು. ಇವರ ಕೋಚಿಂಗ್ ಅಡಿಯಲ್ಲಿ ಮುಂಬೈ ಇಂಡಿಯನ್ಸ್ 2015, 2017, 2019 ಮತ್ತು 2020 ರಲ್ಲಿ ಚಾಂಪಿಯನ್ ಆಗಿತ್ತು. ಕಳೆದೆರಡು ವರ್ಷ ಎಂಐ ತಂಡದ ಪ್ರದರ್ಶನ ಕುಗ್ಗಿದೆ. ಅಲ್ಲದೇ ತಂಡದ ಪ್ರಮುಖ ಬೌಲರ್ಗಳು ಗಾಯದಿಂದ ಹೊರಗುಳಿದಿದ್ದು ಸಮಸ್ಯೆ ಆಗಿತ್ತು.
ಶೇನ್ ಬಾಂಡ್ ಅವರನ್ನು ಕೈಬಿಟ್ಟ ನಂತರ ಐಪಿಎಲ್ 2024ರ ಸೀಸನ್‌ಗೆ ಮುನ್ನ ಮುಂಬೈ ಇಂಡಿಯನ್ಸ್ ತನ್ನ ಹೊಸ ಬೌಲಿಂಗ್ ಕೋಚ್ ಆಗಿ ಶ್ರೀಲಂಕಾದ ವೇಗದ ಬೌಲಿಂಗ್ ದಂತಕಥೆ ಲಸಿತ್ ಮಾಲಿಂಗ ಅವರನ್ನು ಘೋಷಿಸಿದೆ. ಈ ಹಿಂದೆ 2022 ಮತ್ತು 2023ರ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್‌ನ ಬೌಲಿಂಗ್ ಕೋಚ್ ಆಗಿ ಮಾಲಿಂಗ ಕಾರ್ಯ ನಿರ್ವಹಿಸಿದ್ದಾರೆ. 2024ರ ಆವೃತ್ತಿಗೆ ಮಾರ್ಕ್ ಬೌಚರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಸೇರುತ್ತಾರೆ. ಎಂಐನಲ್ಲಿ ಬ್ಯಾಟಿಂಗ್ ಕೋಚ್ ಆಗಿ ಕೀರನ್ ಪೊಲಾರ್ಡ್ ಇದ್ದಾರೆ.