ಹೈದರಾಬಾದ್:ಎರಡು ವರ್ಷಗಳ ಕಾಲ ಲಕ್ನೋ ಸೂಪರ್ ಜೈಂಟ್ಸ್‌ನಲ್ಲಿ ಮೆಂಟರ್ ಪಾತ್ರ ನಿರ್ವಹಿಸಿದ ಗೌತಮ್ ಗಂಭೀರ್ ಇದೀಗ ತಂಡದೊಂದಿಗೆ ತಮ್ಮ ಪ್ರಯಾಣಕ್ಕೆ ಅಂತ್ಯ ಹಾಡಿದ್ದಾರೆ. ಅಲ್ಲದೇ ಮತ್ತೆ ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿಕೊಂಡಿದ್ದಾರೆ. 2012 ಮತ್ತು 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೌತಿ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. 2024ರ ಐಪಿಎಲ್ ಆವೃತ್ತಿಗೆ ತಂಡದ ಮಾರ್ಗದರ್ಶಕರಾಗಿ ಫ್ರಾಂಚೈಸಿಗೆ ಮರಳಲಿದ್ದಾರೆ.
ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಗಂಭೀರ್, ಲಕ್ನೋ ಸೂಪರ್ ಜೈಂಟ್ಸ್ ಜೊತೆಗಿನ ನನ್ನ ಪಯಣ ಅಂತ್ಯವಾಗಿದೆ ಎಂದು ರಾಜೀನಾಮೆ ಪತ್ರವನ್ನು ಪ್ರಕಟಿಸಿ, ಎರಡು ವರ್ಷ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಶೇರ್ ಮಾಡಿದ್ದು, ಅದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ 23 ನಂ. ಜರ್ಸಿ ಹಾಕಿಕೊಂಡಿದ್ದು ಮತ್ತೆ ತಂಡಕ್ಕೆ ಮರಳುವುದಾಗಿ ತಿಳಿಸಿದ್ದಾರೆ.
"ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗಿನ ನನ್ನ ಪ್ರಯಾಣ ಮುಗಿದಿದೆ. ಈ ಪ್ರಯಾಣವನ್ನು ಸ್ಮರಣೀಯವಾಗಿಸಿದ ಎಲ್ಲಾ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಪ್ರತಿಯೊಬ್ಬರಿಗೆ ಅಪಾರ ಪ್ರೀತಿ ಮತ್ತು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಈ ಮಹತ್ವದ ಫ್ರಾಂಚೈಸಿಯನ್ನು ರಚಿಸುವಾಗ ಸ್ಪೂರ್ತಿದಾಯಕ ನಾಯಕತ್ವ ಮತ್ತು ನನ್ನೆಲ್ಲಾ ಪ್ರಯತ್ನಗಳಿಗೆ ನೀಡಿದ ಬೆಂಬಲಕ್ಕಾಗಿ ನಾನು ಡಾ.ಸಂಜೀವ್ ಗೋಯೆಂಕಾರಿಗೆ ಧನ್ಯವಾದ ಹೇಳಬಯಸುತ್ತೇನೆ. ತಂಡವು ಭವಿಷ್ಯದಲ್ಲಿ ಅದ್ಭುತಗಳನ್ನು ಮಾಡುತ್ತದೆ. ಪ್ರತಿಯೊಬ್ಬ ಎಲ್ಎಸ್ಜಿ ಅಭಿಮಾನಿಯನ್ನೂ ಹೆಮ್ಮೆಪಡಿಸುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ಬರೆದಿದ್ದಾರೆ.