ಅಹಮದಾಬಾದ್:16 ನೇ ಆವೃತ್ತಿಯ ಅದ್ಧೂರಿ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್, 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಭರ್ಜರಿ ಜಯ ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಇಂಪ್ಯಾಕ್ಸ್ ಪ್ಲೇಯರ್ ಬಳಕೆ, ಲೇಸರ್ ಬೆಳಕಿನ ಮೂಲಕ ತಂಡದ ಹೆಸರು, ಕಪ್ನ ಮಾದರಿ ಪ್ರದರ್ಶನ, ನಟಿ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ಅವರ ನೃತ್ಯ, ಅರಿಜಿತ್ ಸಿಂಗ್ರ ಗಾಯನ ಸೇರಿದಂತೆ ಹಲವು ಮೊದಲಗಳು ದಾಖಲಾದವು.
ಇಂಪ್ಯಾಕ್ಟ್ ಪ್ಲೇಯರ್ ಬಳಕೆ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸದಾಗಿ ಪರಿಚಯಿಸಲಾದ ಇಂಪ್ಯಾಕ್ಸ್ ಪ್ಲೇಯರ್(ಪ್ರಭಾವಿ ಆಟಗಾರ) ಅವಕಾಶವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಳಸಿಕೊಂಡಿತು. ಬಲಗೈ ಮಧ್ಯಮ ವೇಗಿ ತುಷಾರ್ ದೇಶಪಾಂಡೆ ಅವರನ್ನು ಕಣಕ್ಕಿಳಿಸಿತು. ತುಷಾರ್ ಐಪಿಎಲ್ ಇತಿಹಾಸದಲ್ಲಿ ಮೊದಲ 'ಇಂಪ್ಯಾಕ್ಟ್ ಪ್ಲೇಯರ್' ಎನಿಸಿಕೊಂಡರು. ಇದಲ್ಲದೇ, ಗುಜರಾತ್ ಟೈಟಾನ್ಸ್ ಕೂಡ ಸಾಯಿ ಸುದರ್ಶನ್ ಅವರನ್ನು ಬಳಸಿಕೊಂಡಿತು.
ಚೆನ್ನೈ ತಂಡ ಮೊದಲು ಬ್ಯಾಟ್ ಮಾಡಿ 178 ರನ್ಗಳನ್ನು ಕಲೆ ಹಾಕಿತು. ಈ ಮೊತ್ತವನ್ನು ಕಾಪಾಡಿಕೊಳ್ಳಲು ಹೆಚ್ಚುವರಿ ಬೌಲರ್ ಅನ್ನು ಕಣಕ್ಕಿಳಿಸಲು ಉದ್ದೇಶಿಸಿ, ಬ್ಯಾಟ್ ಮಾಡಿದ್ದ ಅಂಬಟಿ ರಾಯುಡು ಬದಲಾಗಿ ತುಷಾರ್ ದೇಶಪಾಂಡೆಯನ್ನು ಇಂಪ್ಯಾಕ್ಟ್ ಪ್ಲೇಯರ್ ನಿಮಯದಡಿ ಆಡಿಸಿತು. ಇದು ಐಪಿಎಲ್ ಇತಿಹಾಸದಲ್ಲಿಯೇ ಇದೇ ಮೊದಲಾಗಿದೆ.
ಎರಡನೇ ಇಂಪ್ಯಾಕ್ಟ್ ಪ್ಲೇಯರ್:ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ನ ಕೇನ್ ವಿಲಿಯಮ್ಸನ್ ಫೀಲ್ಡಿಂಗ್ ಮಾಡುವಾಗ ಗಾಯಗೊಂಡರು. ನ್ಯೂಜಿಲೆಂಡ್ ಬ್ಯಾಟರ್ ಬದಲಿಯಾಗಿ ಬಿ.ಸಾಯಿ ಸುದರ್ಶನ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡ ಆಯ್ಕೆ ಮಾಡಿತು. ಇದರಿಂದ ಸುದರ್ಶನ್ ಎರಡನೇ ಪ್ರಭಾವಿ ಆಟಗಾರರಾದರು.