ಮಾರ್ಚ್ 31 ರಿಂದ ಅಪೇಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿಗಾಗಿ 10 ಫ್ರಾಂಚೈಸಿಗಳ ನಡುವೆ ವೈಭವದ ಕದನ ಪ್ರಾರಂಭವಾಗಲಿದೆ. ಕ್ರಿಕೆಟ್ ಅಭಿಮಾನಿಗಳು ಈ ಚುಟುಕು ಸಮರವನ್ನು ಕಣ್ತುಂಬಿಕೊಳ್ಳಲು ಎದುರುನೋಡುತ್ತಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ನಾಲ್ಕು ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಪಂದ್ಯ ಜರುಗಲಿದೆ. ಈ 16ನೇ ಆವೃತ್ತಿಯಲ್ಲಿ ಹೆಚ್ಚಿ ಭರವಸೆಯ ಬ್ಯಾಟರ್ಗಳ ಪಟ್ಟಿ ಇಲ್ಲಿದೆ.
ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್):ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಜಸ್ಥಾನ ರಾಯಲ್ಸ್ ಮತ್ತೆ ಅದರತ್ತ ಸಾಗಲು ಸೆಣಸುತ್ತಿದೆ. ಕಳೆದ ವರ್ಷ ಆರೆಂಜ್ ಕ್ಯಾಪ್ ಹೋಲ್ಡರ್ ಆದ ಬಟ್ಲರ್ ಮೇಲೆ ಈ ಬಾರಿ ಹೆಚ್ಚಿನ ಭರವಸೆ ಇಡಲಾಗಿದೆ. ಅವರು ವಿಕೆಟ್ ಕೀಪರ್ ಕೂಡ ಆಗಿದ್ದು ತಂಡಕ್ಕೆ ಹೆಚ್ಚಿನ ಬಲವನ್ನು ನೀಡಲಿದ್ದಾರೆ.
ಬಲಗೈ ಇಂಗ್ಲಿಷ್ ಬ್ಯಾಟರ್ 17 ಪಂದ್ಯಗಳಲ್ಲಿ ನಾಲ್ಕು ಶತಕ ಮತ್ತು ಅರ್ಧ ಶತಕಗಳನ್ನು ಒಳಗೊಂಡಂತೆ 863 ರನ್‌ಗಳನ್ನು ಗಳಿಸಿದರು. ಕಳೆದ ವರ್ಷ ಅವರ ಅದ್ಭುತ ಪ್ರದರ್ಶನ ಈ ವರ್ಷವೂ ಬಟ್ಲರ್ ಮುಂದುವರೆಸುತ್ತಾರ ಎಂಬುದು ಕುತೂಹಲವಾಗಿದೆ. ಬಟ್ಲರ್ 2020 ರಲ್ಲಿ ಐಪಿಎಲ್‌ನಲ್ಲಿ 328 ರನ್ ಗಳಿಸಿದ್ದರು. ವಿಶ್ವಕಪ್ ತಯಾರಿಗಾಗಿ ಇಂಗ್ಲೆಂಡ್ ತಂಡವನ್ನು ಸೇರಲು 2019 ಐಪಿಎಲ್ ಮಧ್ಯದಲ್ಲಿ ತಮ್ಮ ದೇಶಕ್ಕೆ ಮರಳಿದ್ದರು.
ಶುಭಮನ್ ಗಿಲ್ (ಗುಜರಾತ್ ಟೈಟಾನ್ಸ್): ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟಿ20 ಅಂತರಾಷ್ಟ್ರೀಯ ಶತಕ ದಾಖಲಿಸಿದ ಶುಭ್‌ಮನ್ ಗಿಲ್, ಕಳೆದ ವರ್ಷ ಗುಜರಾತ್ ಟೈಟಾನ್ಸ್‌ಗಾಗಿ 483 ರನ್ ಗಳಿಸಿದ್ದರು, ಟೈಟಾನ್ಸ್ ತಮ್ಮ ಚೊಚ್ಚಲ ಋತುವಿನಲ್ಲಿ ತಮ್ಮ ಪ್ರಥಮ ಪ್ರಶಸ್ತಿ ಗೆದ್ದಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಗಿಲ್ 45 ರನ್ ಗಳಿಸಿ ಅಜೇಯರಾಗಿ ಉಳಿದರು.
ಈ ವರ್ಷ ನಾಲ್ಕು ಶತಕಗಳನ್ನು ಸಿಡಿಸುವ ಮೂಲಕ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಆರಂಭಿಕ ಆಟಗಾರನಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅವರ ಪ್ರಸ್ತುತ ಫಾರ್ಮ್ ಹಾಲಿ ಚಾಂಪಿಯನ್‌ಗಳಿಗೆ ಉತ್ತಮ ಆರಂಭದ ನಿರೀಕ್ಷೆಯನ್ನಂತೂ ನೀಡಿದೆ. ಈ ಬಾರಿ ಮತ್ತೆ ಅದ್ಭುತ ಪ್ರದರ್ಶನ ನೀಡಿ ಕಪ್ ಎತ್ತುವ ನಿರೀಕ್ಷೆಯಲ್ಲಿ ಹಾರ್ದಿಕ್ ಪಡೆ ಇದೆ.