ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಬಂದೇ ಬಿಟ್ಟಿತು. ಮುಂದಿನ ಎರಡು ದಿನದಲ್ಲಿ ಮಿಲಿಯನ್ ಡಾಲರ್ ಟೂರ್ನಿ ಅದ್ಧೂರಿ ಆರಂಭ ಕಾಣಲಿದೆ. ಮಾರ್ಚ್ 31ರಿಂದ ಶುರುವಾಗುವ ಲೀಗ್ 74 ದಿನಗಳ ಕಾಲ ನಡೆಯಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಟೈಟನ್ಸ್ ತವರು ನೆಲವಾದ ಅಹಮದಾಬಾದ್ನಲ್ಲಿ ಈ ಪಂದ್ಯ ನಡೆಯಲಿದೆ.
ಪಂದ್ಯಾರಂಭಕ್ಕೂ ಮುನ್ನ ಭರ್ಜರಿ ಮನರಂಜನಾ ಕಾರ್ಯಕ್ರಮ ಜರುಗಲಿದೆ. ಅದ್ಧೂರಿ ಕಾರ್ಯಕ್ರಮಕ್ಕೆ ದೇಶದ ಅತಿ ಹೆಚ್ಚು ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗುತ್ತಿದೆ. ಈ ಸ್ಟೇಡಿಯಂಗೆ ಗ್ಲಾಮರ್ ಟಚ್ ನೀಡಲು ಬಾಲಿವುಡ್‌ನ ಹಲವು ದೊಡ್ಡ ತಾರೆಯರು ಆಗಮಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ವಿಮೆನ್ಸ್ ಪ್ರೀಮಿಯರ್ ಲೀಗ್ನ ಆರಂಭಿಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಉದ್ಘಾಟನಾ ಸಮಾರಂಭದಲ್ಲಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ರಂಜಿಸಿದ್ದರು. ಖ್ಯಾತ ಗಾಯಕ ಎಪಿ ಧಿಲ್ಲೋನ್ ಮಹಿಳಾ ಪ್ರೀಮಿಯರ್ ಲೀಗ್ನ ಗೀತೆ ಜೊತೆಗೆ ಹಿಟ್ ಹಾಡುಗಳನ್ನು ಹಾಡಿ ಮನರಂಜನೆ ನೀಡಿದ್ದರು.
ನಿರೀಕ್ಷಿತ ತಾರೆಗಳ ಪಟ್ಟಿ:ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಯಾವೆಲ್ಲ ತಾರೆಯರು ಇರಲಿದ್ದಾರೆ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿಲ್ಲ. ಆದರೆ ಕಾರ್ಯಕ್ರಮದ ಭಾಗವಾಗುವ ಸಂಭವನೀಯರ ಹೆಸರುಗಳು ಇಲ್ಲಿವೆ. ಈ ಪಟ್ಟಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಹೆಸರು ಮುಂಚೂಣಿಯಲ್ಲಿದೆ. ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಹೊಂದಿರುವ ಅವರು ಭಾರತದ ಬಹು ಭಾಷೆಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇವರ ಜೊತೆಗೆ ತಮನ್ನಾ ಭಾಟಿಯಾ, ಗಾಯಕರಾದ ಅರಿಜಿತ್ ಸಿಂಗ್, ಟೈಗರ್ ಶ್ರಾಫ್ ಮತ್ತು ಕತ್ರಿನಾ ಕೈಫ್ ಕೂಡ ಸಮಾರಂಭದಲ್ಲಿ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ.