ನವದೆಹಲಿ:41 ವರ್ಷದ ಮಹೇಂದ್ರ ಸಿಂಗ್ ಧೋನಿಗೆ ಇದು ಕೊನೆಯ ಐಪಿಎಲ್ ಎಂದು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು, ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಮಾತುಗಳು ಈ ವೈರಲ್ ವಿಚಾರಕ್ಕೆ ಹೆಚ್ಚಿನ ಪುಷ್ಠಿ ನೀಡಿದೆ. 2023ರ ಐಪಿಎಲ್ ಬಗ್ಗೆ ಮಾತನಾಡಿರುವ ಅವರು ಈ ವರ್ಷದ ಐಪಿಎಲ್ ಧೋನಿಯ ಸಲುವಾಗಿ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ.
ಇನ್ನು 21 ದಿನದಲ್ಲಿ ಭಾರತದಲ್ಲಿ ಪುರುಷರ ಐಪಿಎಲ್ ಆರಂಭವಾಗಲಿದೆ. ಈಗಾಗಲೇ ಐಪಿಎಲ್ ಪ್ರಚಾರ ಆರಂಭವಾಗಿದ್ದು, ಸ್ಟಾರ್ ಸ್ಪೋರ್ಟ್ ಬಿಡುಗಡೆ ಮಾಡಿರುವ ಪ್ರಮೋಷನ್ ವಿಡಿಯೋ ವೈರಲ್ ಆಗಿದೆ. ಚೊಚ್ಚಲ ಮಹಿಳಾ ಐಪಿಎಲ್ ಭರ್ಜರಿಯಾಗಿ ಸಾಗುತ್ತಿದ್ದು, ಐಪಿಎಲ್ಗೂ ಮುನ್ನ ಜನರನ್ನು ಟೀವಿ ಮುಂದೆ ಕರೆ ತಂದಿದೆ. ಪ್ರಥಮ ಆವೃತ್ತಿಯ ಮಹಿಳೆಯರ ಲೀಗ್ನಲ್ಲಿ ಸಿಕ್ಸ್, ಫೋರ್ಗಳಿಂದ ಬೃಹತ್ ರನ್ ಹರಿದು ಬರುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಹುತೇಕ ಸದಸ್ಯರು ಹೋಮ್ ಗೌಂಡ್ನಲ್ಲಿ ಸೇರಿ ಅಭ್ಯಾಸ ಆರಂಭಿಸಿದ್ದಾರೆ. ಇದೇ ತಿಂಗಳ ಎರಡರಂದು ಧೋನಿ ತಂಡವನ್ನು ಸೇರಿದ್ದರು. ಧೋನಿ ನೆಟ್ನಲ್ಲಿ ಭರ್ಜರಿ ಬೆವರಿಳಿಸುತ್ತಿದ್ದಾರೆ. ಧೋನಿ ಜೊತೆಗೆ ವಿದೇಶಿ ಆಟಗಾರರು ತಂಡಕ್ಕೆ ಸೇರಿಕೊಂಡಿದ್ದು, ಎಂಎ ಚಿದಂಬರಂ ಸ್ಟೇಡಿಯಂ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಮಾತನಾಡಿ,"ಐಪಿಎಲ್ ಆರಂಭವಾಗುತ್ತಿದೆ, ಎಲ್ಲೆಡೆ ಮತ್ತೆ ಚೆನ್ನೈನ ಹಳದಿ ಹಬ್ಬ ಪ್ರಾರಂಭವಾಗುತ್ತದೆ. ಚೆನ್ನೈನಲ್ಲಿ ಹಳದಿ ಸೇನೆಯ ಆಟಕ್ಕೆ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ತವರು ನೆಲದಲ್ಲಿ ತಂಡದ ಗೆಲುವಿಗೆ ಬೆಂಬಲಿಸಲು ಪ್ರೇಕ್ಷಕರು ತುದಿಗಾಲಿನಲ್ಲಿದ್ದಾರೆ. ಕೋವಿಡ್ ಬಂಧನದ ರಿಲ್ಯಾಕ್ಸ್ ಆಗಲು ಪ್ರೇಕ್ಷಕರಿಗೆ ಐಪಿಎಲ್ ಬೃಹತ್ ಮನರಂಜನೆಯಾಗಿರಲಿದೆ" ಎಂದಿದ್ದಾರೆ.