ಮುಂಬೈ:ದಿನೇಶ್ ಕಾರ್ತಿಕ್(ಡಿಕೆ) 15ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇದೇ ವರ್ಷ ರೋಹಿತ್ ಶರ್ಮಾ ನೇತೃತ್ವದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಪುನರ್ ನಿರ್ಮಾಣಗೊಳ್ಳುವ ತಂಡದಲ್ಲಿ ಅವಕಾಶ ಪಡೆಯಲು ಈ ತಮಿಳುನಾಡು ಕ್ರಿಕೆಟಿಗ ಸಮರ್ಥರು ಎಂಬ ಚರ್ಚೆಗಳು ನಡೆಯಲಾರಂಭಿಸಿವೆ.
2022ರ ಐಪಿಎಲ್ನಲ್ಲಿ ದಿನೇಶ್ ಕಾರ್ತಿಕ್ ಕ್ರಮವಾಗಿ 32(14), 14(7), 44(23), 7(2) ಹಾಗೂ 34(14) ರನ್ಗಳಿಸಿದ್ದಾರೆ. ಕೊನೆಯ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಮಾತ್ರ ಅವರು ವಿಕೆಟ್ ಒಪ್ಪಿಸಿದ್ದರೆ, ಉಳಿದೆಲ್ಲಾ ಪಂದ್ಯಗಳಲ್ಲೂ ಅವರದ್ದು ಅಜೇಯ ಆಟ. ಡಿಕೆ, ಒಟ್ಟಾರೆ 5 ಪಂದ್ಯಗಳಿಂದ 218ರ ಸ್ಟ್ರೈಕ್ ರೇಟ್ನಲ್ಲಿ 131 ರನ್ಗಳಿಸಿದ್ದಾರೆ.
ಸಿಎಸ್ಕೆ ವಿರುದ್ಧ ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಅವರು 242ರ ಸ್ಟ್ರೈಕ್ರೇಟ್ನಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ಮಾಡಿದ್ದರು. ತಂಡ 8 ವಿಕೆಟ್ ಕಳೆದುಕೊಂಡಿದ್ದರೂ ಕೂಡಾ ಅಭಿಮಾನಿಗಳು ಗೆಲುವಿನ ಆಸೆ ಇಟ್ಟುಕೊಳ್ಳುವಂತೆ ಮಾಡಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧವೂ 170 ರನ್ ಚೇಸ್ ಮಾಡುವಾಗ ತಂಡ 80ಕ್ಕೆ 5 ವಿಕೆಟ್ ಕಳೆದುಕೊಂಡಿದ್ದರೂ ಯುವ ಆಟಗಾರರ ಜೊತೆಯಾಗಿ ಆಡಿ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದರು. ಈ ಅದ್ಭುತ ಪ್ರದರ್ಶನವೇ ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಫಿನಿಶರ್ ಆಗಿ ಆಡುವುದಕ್ಕೆ ಅರ್ಹರು ಎನ್ನುವುದನ್ನು ತೋರಿಸುತ್ತಿದೆ.