ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಪ್ರತಿಭೆಗಳನ್ನು ಕ್ರಿಕೆಟ್ ಜಗತ್ತಿಗೆ ತೋರಿಸುವ ವಿಶ್ವದ ಬೃಹತ್ ವೇದಿಕೆ. ಈಗಾಗಲೆ 15 ಆವೃತ್ತಿಗಳಲ್ಲಿ ನೂರಾರು ಪ್ರತಿಭಾನ್ವಿತ ಕ್ರಿಕೆಟಿಗರನ್ನು ಪರಿಚಯಿಸಿರುವ ಶ್ರೀಮಂತ ಕ್ರಿಕೆಟ್ ಲೀಗ್ ವರ್ಷದಿಂದ ವರ್ಷಕ್ಕೆ ತನ್ನ ಕಾರ್ಯವನ್ನು ವೃದ್ಧಿಸಿಕೊಂಡು ಹೋಗುತ್ತಿದೆ.
2022ನೇ ಆವೃತ್ತಿಯಲ್ಲೂ ಐಪಿಎಲ್ ಕೆಲವು ಪ್ರತಿಭಾನ್ವಿತ ಕ್ರಿಕೆಟಿಗರ ಅನ್ವೇಷಣೆಗೆ ಸಾಕ್ಷಿಯಾಗಿದೆ. ಗುಜರಾತ್ ಲಯನ್ಸ್ನಲ್ಲಿ ದರ್ಶನ್ ನಲ್ಕಂಡೆ, ಲಖನೌ ಸೂಪರ್ ಜೈಂಟ್ಸ್ನಲ್ಲಿ ಆಯುಷ್ ಬದೋನಿ, ಮುಂಬೈ ಇಂಡಿಯನ್ಸ್ನ ತಿಲಕ್ ವರ್ಮಾ, ಸನ್ರೈಸರ್ಸ್ ಹೈದರಾಬಾದ್ನ ಉಮ್ರಾನ್ ಮಲಿಕ್.. ಹೀಗೆ ಹಲವಾರು ಕ್ರಿಕೆಟಿಗರು ಈ ವರ್ಷ ಕ್ರಿಕೆಟ್ ವಲಯದಲ್ಲಿ ಚರ್ಚೆಯಲ್ಲಿರುವ ಪ್ರತಿಭಾನ್ವಿತರು.
ಈ ಪಟ್ಟಿಗೆ ಹೊಸದಾಗಿ ಪಂಜಾಬ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಜಿತೇಶ್ ಶರ್ಮಾ ಸೇರ್ಪಡೆಯಾಗಿದ್ದಾರೆ. ಅವರಿಗೆ ದೊಡ್ಡ ಇನ್ನಿಂಗ್ಸ್ ಆಡುವ ಅವಕಾಶ ಇನ್ನೂ ಸಿಕ್ಕಿಲ್ಲವಾದ್ದರಿಂದ ಬೇಗ ಪರಿಚಿತರಾಗಿಲ್ಲ. ಆದರೆ ಸಿಕ್ಕ ಅತ್ಯಲ್ಪ ಎಸೆತಗಳಲ್ಲಿ 200ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ ತಂಡದ ಮಧ್ಯಮ ಕ್ರಮಾಂಕದ ಬಲ ಮತ್ತು ತಂಡ ಮೊತ್ತವನ್ನು ಸಾಧ್ಯವಾದಷ್ಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಪಂಜಾಬ್ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಶಿಖರ್ ಧವನ್ 70 ಮತ್ತು ಮಯಾಂಕ್ 52 ರನ್ಗಳಿಸಿದ್ದು ಹೆಚ್ಚು ಸುದ್ದಿಯಾಗಿದೆ. ಆದರೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದ ಜಿತೇಶ್ ಶರ್ಮಾ ಕೇವಲ 15 ಎಸೆತಗಳಲ್ಲಿ 30 ರನ್ ಸಿಡಿಸಿದ್ದರು. ಅವರ ಈ ಕೊಡುಗೆ ಪಂಜಾಬ್ ಗೆಲುವಿನಲ್ಲಿ ಪ್ರಮುಖವಾಗಿತ್ತು.ಈ ಪಂದ್ಯದಲ್ಲಿ ಅಷ್ಟೇ ಅಲ್ಲದೆ ಐಪಿಎಲ್ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ 17 ಎಸೆತಗಳಲ್ಲಿ 26, ಗುಜರಾತ್ ಲಯನ್ಸ್ ವಿರುದ್ಧ 11 ಎಸೆತಗಳಲ್ಲಿ 23 ರನ್ಗಳಿಸಿದ್ದರು.
ಜಿತೇಶ್ ಶರ್ಮಾ ಯಾರು?ಜಿತೇಶ್ ಶರ್ಮಾ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದು, ವಿದರ್ಭ ಡೊಮೆಸ್ಟಿಕ್ ತಂಡದಲ್ಲಿ ಆಡುತ್ತಿದ್ದಾರೆ. 28 ವರ್ಷದ ಜಿತೇಶ್ 2014ರ ಫೆಬ್ರವರಿಯಲ್ಲಿ ಲಿಸ್ಟ್ ಎ ಕ್ರಿಕೆಟ್ಗೆ, ಮಾರ್ಚ್ನಲ್ಲಿ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. 2015ರಲ್ಲಿ ಒಡಿಶಾ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.
ಬಲಗೈ ಬ್ಯಾಟರ್ ಆಗಿರುವ ಇವರನ್ನು 2016ರಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿತ್ತಾದರೂ ಒಂದೂ ಪಂದ್ಯದಲ್ಲೂ ಆಡುವ ಅವಕಾಶ ನೀಡಲಿಲ್ಲ. 2022ರ ಮೆಗಾ ಹರಾಜಿನಲ್ಲಿ ಅವರನ್ನು ಪಂಜಾಬ್ ಕಿಂಗ್ಸ್ ₹20 ಲಕ್ಷಕ್ಕೆ ಖರೀದಿಸಿದ್ದು, ಕಳೆದ ಮೂರು ಪಂದ್ಯಗಳಲ್ಲೂ ಅವಕಾಶ ನೀಡಿದೆ. ಈಗಾಗಲೇ ಸಿಕ್ಕಿರುವ ಅವಕಾಶಗಳಲ್ಲಿ ದೊಡ್ಡ ಹೊಡೆತಗಳನ್ನು ಸಿಡಿಸಿ ಮಿಂಚಿರುವ ಅವರಿಗೆ ಮತ್ತೊಂದಷ್ಟು ಅವಕಾಶ ಸಿಗುವ ಅವಕಾಶವಿದ್ದು, ಐಪಿಎಲ್ನಲ್ಲಿ ಈ ಬಾರಿ ಹೊರಬಂದ ಅತ್ಯುತ್ತಮ ಪ್ರತಿಭೆಗಳಲ್ಲಿ ಒಬ್ಬರಾಗಲಿದ್ದಾರೆ.
ಇದನ್ನೂ ಓದಿ:ಮಯಾಂಕ್ ಮುಂದೆ ಮಂಕಾದ ಮುಂಬೈ.. ‘ಶಿಖರ’ದೆತ್ತರ ಗುರಿ ಮುಟ್ಟದೇ ಸತತ 5ನೇ ಸೋಲು ಕಂಡ ರೋಹಿತ್ ಬಳಗ