ಮುಂಬೈ :2022ರ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಾವೂ ಉಳಿಸಿಕೊಳ್ಳುವ ಆಟಗಾರರ ಹೆಸರನ್ನು ಮಂಗಳವಾರ ಬಿಸಿಸಿಐಗೆ ಸಲ್ಲಿಸಬೇಕಿದೆ. ಹಾಗಾಗಿ, ಭಾರತೀಯ ಕ್ರಿಕೆಟ್ನಲ್ಲಿ ಚರ್ಚೆಯಾಗುತ್ತಿರುವಂತೆ ಹಳೆಯ 8 ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಸಂಭಾವ್ಯ ಪಟ್ಟಿ ಇಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ :ಹಾಲಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲೇ ಹೇಳಿದಂತೆ ನಾಯಕ ಧೋನಿಯನ್ನು ಮೊದಲ ಆಟಗಾರನಾಗಿ ರಿಟೈನ್ ಮಾಡಿಕೊಳ್ಳಲು ಬಯಸಿದೆ. ಉಳಿದಂತೆ ಆಲ್ರೌಂಡರ್ ರವೀಂದ್ರ ಜಡೇಜಾ, ಆರೆಂಜ್ ಕ್ಯಾಪ್ ಪಡೆದಿರುವ ರುತುರಾಜ್ ಗಾಯಕ್ವಾಡ್ ಮತ್ತು ವಿದೇಶಿ ಆಟಗಾರರಲ್ಲಿ ಮೊಯೀನ್ ಅಲಿಯನ್ನು ಅಂತಿಮಗೊಳಿಸಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಮುಂಬೈ ಇಂಡಿಯನ್ಸ್ :ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬೈ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಕೀರನ್ ಪೊಲಾರ್ಡ್ರನ್ನು ರಿಟೈನ್ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ, ಉಳಿದ ಒಂದು ಸ್ಥಾನದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಬಹುಶಃ ಇಶಾನ್ ಕಿಶನ್ ಅಥವಾ ಹಾರ್ದಿಕ್ ಪಾಂಡ್ಯರಲ್ಲಿ ಒಬ್ಬರನ್ನು ಉಳಿಸಿಕೊಳ್ಳಬಹುದು ಎನ್ನಲಾಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು :ಐಪಿಎಲ್ನ ಅತ್ಯಂತ ಮನರಂಜನಾ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಮತ್ತು ಗ್ಲೇನ್ ಮ್ಯಾಕ್ಸ್ವೆಲ್ರನ್ನು ಉಳಿಸಿಕೊಳ್ಳುವುದು ಪಕ್ಕೈ ಆಗಿದೆ. ಸಿರಾಜ್, ಪಡಿಕ್ಕಲ್ ಮತ್ತು ಚಹಾಲ್ ಮುಂದಿರುವ ಆಯ್ಕೆಯಾಗಿದ್ದರೂ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ :ಸತತ ಮೂರು ಆವೃತ್ತಿಗಳಲ್ಲಿ ಪ್ಲೇಆಫ್ ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕ ರಿಷಭ್ ಪಂತ್, ಯುವ ಆಟಗಾರ ಪೃಥ್ವಿ ಶಾ ಮತ್ತು ದಕ್ಷಿಣ ಆಫ್ರಿಕಾದ ವೇಗಿ ಎನ್ರಿಚ್ ನಾರ್ಕಿಯಾ ಅವರನ್ನು ರಿಟೈನ್ ಮಾಡಿಕೊಳ್ಳುವುದು ಬಹುತೇಕ ಖಚಿತ. ಇನ್ನೊಂದು ಸ್ಥಾನಕ್ಕೆ ಅಕ್ಷರ್ ಪಟೇಲ್ ಮುಂಚೂಣಿಯಲ್ಲಿದ್ದಾರೆ. ಶ್ರೇಯಸ್ ಅಯ್ಯರ್ ಹರಾಜಿಗೆ ಹೋಗುವುದಾಗಿ ಈಗಾಗಲೇ ಫ್ರಾಂಚೈಸಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.