ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮಂಗಳವಾರ ವಾಂಖೆಡೆಯಲ್ಲಿ ನಡೆಯುವ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಎರಡೂ ತಂಡಗಳು ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯುತ್ತಿವೆ.
ಆರ್ಸಿಬಿ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ ಬೌಲಿಂಗ್ನಲ್ಲಿ ಕಳಪೆ ಪ್ರದರ್ಶನ ತೋರಿ 205 ರನ್ ಗಳಿಸಿಯೂ ಸೋಲು ಕಂಡಿದ್ದ ಆರ್ಸಿಬಿ 2ನೇ ಪಂದ್ಯದಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿ ಬಲಿಷ್ಠ ಪಂಜಾಬ್ ತಂಡವನ್ನು ಕೇವಲ 128 ರನ್ಗಳಿಗೆ ನಿಯಂತ್ರಿಸಿ ಜಯ ಸಾಧಿಸಿತ್ತು. ಮೊದಲ ಪಂದ್ಯದಲ್ಲಿ ಬೌಲಿಂಗ್ ಕೈಕೊಟ್ಟರೆ, 2ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 129ರನ್ಗಳ ಸಾಧಾರಣ ಗುರಿಯನ್ನು 7 ವಿಕೆಟ್ ಕಳೆದುಕೊಂಡು ತಲುಪಿತ್ತು. ಹಾಗಾಗಿ 3ನೇ ಪಂದ್ಯದಲ್ಲಿ ತಂಡದ ವೈಫಲ್ಯಗಳನ್ನು ಸರಿದೂಗಿಸಿಕೊಂಡು ಡುಪ್ಲೆಸಿಸ್ ಬಳಗ ಹೊಸ ಯೋಜನೆಗಳೊಂದಿಗೆ ಕಣಕ್ಕಿಳಿಯುತ್ತಿದೆ.
ಚೇಸಿಂಗ್ ಟ್ರೆಂಡ್ ಆಗಿರುವುದರಿಂದ ಮತ್ತು 2ನೇ ಬ್ಯಾಟಿಂಗ್ ವೇಳೆ ಬೌಲಿಂಗ್ ತಂಡದ ಮೇಲೆ ಹಿಮ ಪರಿಣಾಮ ಬೀರುವುದರಿಂದ ಚೇಸಿಂಗ್ ಮಾಡಲು ನಿರ್ಧರಿಸಿರುವುದಾಗಿ ಆರ್ಸಿಬಿ ನಾಯಕ ಪ್ಲೆಸಿಸ್ ತಿಳಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಆಡಿರುವ 2 ಪಂದ್ಯಗಳಲ್ಲೂ ಪ್ರಾಬಲ್ಯಯುತ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ್ದ ಸಾಮ್ಸನ್ ಬಳಗ, ಬ್ಯಾಟಿಂಗ್ನಲ್ಲಿ 210 ರನ್ ಸಿಡಿಸಿದರೆ, ಬೌಲಿಂಗ್ನಲ್ಲಿ ಹೈದರಾಬಾದ್ ತಂಡವನ್ನು ಕೇವಲ 149 ರನ್ಗಳಿಗೆ ಕಟ್ಟಿಹಾಕುವ ಮೂಲಕ 61 ರನ್ಗಳ ಜಯ ಸಾಧಿಸಿತ್ತು. ಸತತ 2 ಪಂದ್ಯಗಳಲ್ಲೂ ಮೊದಲು ಬ್ಯಾಟಿಂಗ್ ಮಾಡಿ ಗೆಲುವು ಸಾಧಿಸಿರುವ ರಾಯಲ್ಸ್ ಇಂದು ಟಾಸ್ ಸೋತಿರುವುದಕ್ಕೆ ಯಾವುದೇ ಹಿಂಜರಿಕೆಯಿಲ್ಲ, ಹಿಂದಿನ ಪಂದ್ಯಗಳಲ್ಲೂ ಮೊದಲು ಬ್ಯಾಟಿಂಗ್ ಮಾಡಿ ಗೆಲುವು ಸಾಧಿಸಿರುವುದರಿಂದ ಇಂದಿನ ಪಂದ್ಯದಲ್ಲೂ ಅದೇ ಯೋಜನೆಗಳನ್ನು ಮುಂದುವರಿಸುತ್ತೇನೆ ಎಂದು ಆರ್ಆರ್ ನಾಯಕು ಸಾಮ್ಸನ್ ತಿಳಿಸಿದ್ದಾರೆ.